ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ, ಜೋನಾಸ್ ಕುಟುಂಬ ಇಂದು ಅಮೆರಿಕದಿಂದ ಭಾರತಕ್ಕೆ ಆಗಮಿಸಿದೆ. ಬಾಲಿವುಡ್ ಬೆಡಗಿ ತಮ್ಮ ಪತಿ, ಅಮೆರಿಕನ್ ಗಾಯಕ ನಿಕ್ ಜೋನಾಸ್ ಮತ್ತು ಪುತ್ರಿ ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಜೊತೆ ತವರಿಗೆ ಆಗಮಿಸಿದ್ದಾರೆ. ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಈ ಸ್ಟಾರ್ ಕುಟುಂಬ ಕಾಣಿಸಿಕೊಂಡಿದ್ದು, ಕ್ಯಾಮರಾಗಳಿಗೆ ಪೋಸ್ ಕೂಡ ಕೊಟ್ಟಿದ್ದಾರೆ.
2022ರ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ತಮ್ಮ ಹೆಣ್ಣು ಮಗುವನ್ನು ಸ್ವಾಗತಿಸಿದ ನಂತರ ಪುತ್ರಿ ಜೊತೆಗೆ ನಿಕ್ ಮತ್ತು ಪ್ರಿಯಾಂಕಾ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ. ಕಳೆದ ವರ್ಷ ತಮ್ಮ ಹೇರ್‌ಕೇರ್ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವ ಸಲುವಾಗಿ ದೇಶಕ್ಕೆ ಬಂದಿದ್ದರೂ, ಪುತ್ರಿಯೊಂದಿಗೆ ಇದು ಅವರ ಮೊದಲ ಭೇಟಿ ಆಗಿದೆ. ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ದಂಪತಿಗಳು ಕಾಣಿಸಿಕೊಂಡಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಗುಲಾಬಿ ಬಣ್ಣದ ಮಾರ್ಡೆನ್ ಉಡುಗೆ ಧರಿಸಿದ್ದರು. ಮತ್ತೊಂದೆಡೆ, ನಿಕ್ ನೇವಿ ಬ್ಲೂ ಶರ್ಟ್ ಮತ್ತು ತಿಳಿ ನೀಲಿ ಡೆನಿಮ್‌ನಲ್ಲಿ ಕೂಲ್ ಅಗಿ ಕಾಣಿಸಿಕೊಂಡಿದ್ದಾರೆ. ಗ್ಲೋಬಲ್ ಸ್ಟಾರ್ ಕಪಲ್ನ ಪುತ್ರಿ, ಪುಟ್ಟ ರಾಜಕುಮಾರಿ ಬೂದು ಬಣ್ಣದ ಫ್ರಾಕ್‌ನಲ್ಲಿ ಬಹಳ ಮುದ್ದಾಗಿ ಕಾಣುತ್ತಿದ್ದಳು. ಈ ಸ್ಟಾರ್ ಫ್ಯಾಮಿಲಿ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ನಿಕ್ ಮತ್ತು ಪ್ರಿಯಾಂಕಾ ಫ್ಯಾಮಿಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ಲಾಂಚ್ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮುಂಬೈಗೆ ಆಗಮಿಸಿದ್ದಾರೆ. ಭಾರತದ ಸಾಂಸ್ಕೃತಿಕ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯೊಂದಿಗೆ ಇಂದು NMACC ಆರಂಭಗೊಳ್ಳಲಿದೆ. ಇದು ಸಂಗೀತ, ರಂಗಭೂಮಿ, ಲಲಿತಕಲೆಗಳು ಮತ್ತು ಕರಕುಶಲ ಸೇರಿದಂತೆ ಭಾರತದ ಅತ್ಯುತ್ತಮ ಪ್ರದರ್ಶನಗಳಿಗೆ ಸಾಕ್ಷಿಯಾಗಲಿದೆ.