ಮೂರು ವರ್ಷಗಳ ಬಳಿಕ ತವರಿಗೆ ಆಗಮಿಸಿದ್ದ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಲಾಸ್ ಏಂಜಲೀಸ್‌ಗೆ ಮರಳಿದ್ದಾರೆ. ಪ್ರಿಯಾಂಕಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡಿದ್ದು, ಲಾಸ್ ಏಂಜಲೀಸ್‌ಗೆ ಹಿಂದಿರುಗಿರುವ ವಿಚಾರವನ್ನು ತಿಳಿಸಿದ್ದಾರೆ.
UNICEFನ ರಾಯಭಾರಿಯಾಗಿ ಉತ್ತರ ಪ್ರದೇಶದ ಕೆಲವು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡುವುದರ ಜೊತೆಗೆ ತಮ್ಮ ಹೇರ್‌ಕೇರ್ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಪ್ರಿಯಾಂಕಾ ಕೆಲ ದಿನಗಳ ಕಾಲ ಭಾರತದಲ್ಲಿದ್ದರು. 3 ವರ್ಷಗಳ ನಂತರ ನವೆಂಬರ್ 1 ರಂದು ಬೆಳಗ್ಗೆ ಅವರು ಭಾರತಕ್ಕೆ ಬಂದಿದ್ದರು. ಭಾರತದಲ್ಲಿ ತಂಗಿದ್ದಾಗ, ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ತಾರತಮ್ಯವನ್ನು ಕೊನೆಗೊಳಿಸಲು UNICEF ಮತ್ತು ಅದರ ಪಾಲುದಾರರು ಮಾಡುತ್ತಿರುವ ಕೆಲಸವನ್ನು ನೋಡಲು ಪ್ರಿಯಾಂಕಾ ಚೋಪ್ರಾ ಉತ್ತರ ಪ್ರದೇಶದ ಲಕ್ನೋಗೆ ಭೇಟಿ ನೀಡಿದ್ದರು. ಪ್ರಿಯಾಂಕಾ ಅವರು ಈ ಭೇಟಿಯ ಹಲವಾರು ಚಿತ್ರಗಳು ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಭಾರತಕ್ಕೆ ಭೇಟಿ ವೇಳೆ, ಲಕ್ನೋದ ಔರಂಗಾಬಾದ್‌ನ ಶಾಲೆಗಳಿಗೆ ಭೇಟಿ ನೀಡಿದರು, ಅಲ್ಲಿ ಚಿಕ್ಕ ಮಕ್ಕಳನ್ನು ಭೇಟಿಯಾದರು. ಲಾಲ್‌ಪುರದ ಅಂಗನವಾಡಿಗೂ ಭೇಟಿ ನೀಡಿದರು. ತಮ್ಮ ಭೇಟಿಯ ಸಂದರ್ಭದಲ್ಲಿ ಪ್ರಿಯಾಂಕಾ ಅವರು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಮಹಿಳೆಯರ ರಕ್ಷಣೆ ಬಗ್ಗೆ ಜವಾಬ್ದಾರಿಯುತ ವರ್ತನೆ ಮತ್ತು ರಾಜ್ಯದಲ್ಲಿ ಅವರ ಸ್ಥಿತಿಯ ಸುಧಾರಣೆ ವಿಚಾರವಾಗಿ ಶ್ಲಾಘಿಸಿದರು.