ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ಆ್ಯಕ್ಷನ್ ಕಟ್ ಹೇಳುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಆಡುಜೀವಿತಂ'. ಪೃಥ್ವಿರಾಜ್ ಸುಕುಮಾರನ್, ಅಮಲಾ ಪೌಲ್ ತೆರೆ ಹಂಚಿಕೊಂಡಿರುವ 'ಆಡುಜೀವಿತಂ' ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಬಹುತೇಕ ಶೂಟಿಂಗ್ ಮುಗಿಸಿರೋ ಆಡುಜೀವಿತಂ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ನಾಳೆ ಘೋಷಿಸಲಿದೆ.
ಆಡುಜೀವಿತಂ ಚಿತ್ರದ ಕಥೆ ಕೆಲಸವನ್ನರಸಿ ವಲಸೆ ಹೋಗುವವರ ಸುತ್ತ ಸುತ್ತುತ್ತದೆ. ತಮ್ಮ ಹೊಟ್ಟೆಪಾಡಿಗಾಗಿ ಕೆಲಸ ಅರಸಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಜೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಅನುಭವಿಸುವ ಕಷ್ಟ, ಎದುರಿಸುವ ಸಮಸ್ಯೆಯೇ ಚಿತ್ರದ ಹೈಲೆಟ್ಸ್. ಆತನ ಪಾಸ್ ಪೋರ್ಟ್ ಕಸಿದು ಆತನಿಗೆ ಕೊಡುವ ಹಿಂಸೆ, ಆ ಬಿಸಿಲ ಪ್ರದೇಶದಲ್ಲಿ ಆತ ಪಡುವ ಯಾತನೆ ಕುರಿತು ಕಥೆ ಸಾಗುತ್ತದೆ.
ನಿರ್ದೇಶಕ ಬ್ಲೆಸ್ಸಿ ಅವರ ಹದಿನೈದು ವರ್ಷಗಳ ಕನಸಿನ ಕಥೆ ಇದು. ಅವರ ಕಲ್ಪನೆಯ ಪಾತ್ರದಲ್ಲಿ, ವಲಸಿಗ ವ್ಯಕ್ತಿಯಾಗಿ ಹೊಸ ಲುಕ್ ಮೂಲಕ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್ ಅವರು ಈ ಚಿತ್ರಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಇಡೀ ಚಿತ್ರತಂಡ ಹಗಲು ರಾತ್ರಿ ಎನ್ನದೇ ಚಿತ್ರದ ಔಟ್ ಪುಟ್ಗಾಗಿ ಶ್ರಮ ವಹಿಸಿದೆ.
ಆಡುಜೀವಿತಂ 2008 ರಲ್ಲಿ ಬೆನ್ಯಾಮಿನ್ ಬರೆದ ಅದೇ ಹೆಸರಿನ ಮಲಯಾಳಂ ಕಾದಂಬರಿ ಆಧರಿಸಿರುವ ಸಿನಿಮಾ. ನಜೀಬ್ ಎಂಬ ವಲಸಿಗ ಕಾರ್ಮಿಕನ ಕಥೆ, ಸೌದಿ ಅರೇಬಿಯಾದ ಮರು ಭೂಮಿಯಲ್ಲಿ ಅವನು ಅನುಭವಿಸುವ ದುಃಸ್ಥಿತಿ ಮತ್ತು ಅಸಹಾಯಕತೆಯ ಕಥೆ ಚಿತ್ರದ ಸಾರಾಂಶ ಎನ್ನುತ್ತದೆ ಚಿತ್ರತಂಡ.