ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ವಾಸ್ತವಂ, ಕ್ಲಾಸ್‌ಮೇಟ್ಸ್, ಜನಗಣಮನ ಹಾಗೂ ಲೂಸಿಫರ್ ಹೀಗೆ ವಿಭಿನ್ನ ಸಿನಿಮಾಗಳನ್ನು ಮಾಡಿಕೊಂಡಿ ಬಂದಿದ್ದಾರೆ. ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಹಾಗು ಸಿನಿಮಾ ವಿತರಕನಾಗಿ ಪೃಥ್ವಿರಾಜ್ ಸದ್ಯ ಕಡುವ ಸಿನಿಮಾದ ಪ್ರಚಾರದಲ್ಲಿದ್ದಾರೆ. ಅವರ ನಟನೆಯ ಕಡುವ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಜೂನ್ 30ರಂದು ಬಿಡುಗಡೆಯಾಗುತ್ತಿದೆ.
ಈ ಸಿನಿಮಾದಲ್ಲಿ ಪೃಥ್ವಿರಾಜ್ಗೆ ಜೋಡಿಯಾಗಿ ಸಂಯುಕ್ತಾ ಮೆನನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ವಿವೇಕ್ ಓಬೆರಾಯ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಸದ್ಯ ಟೀಸರ್ನಿಂದಲೇ ಕುತೂಹಲ ಹುಟ್ಟಿಸಿದೆ. ಕಡುವ ಸಿನಿಮಾದ ಪ್ರಚಾರಕ್ಕಾಗಿ ಇಂದು ಮಲೆಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಬೆಂಗಳೂರಿಗೆ ಬಂದಿದ್ದರು. ಪೃಥ್ವಿರಾಜ್ಗೆ ಜೊತೆಯಾಗಿ ನಾಯಕಿ ಸಂಯುಕ್ತಾ ಮೆನನ್ ಕೂಡ ಸಾಥ್ ನೀಡಿದರು.
ಶಿವಣ್ಣ ನನ್ನ ಮೊದಲ ಸ್ನೇಹಿತರು ಎಂದು ನಟ ಪೃಥ್ವಿರಾಜ್ ಸುಕುಮಾರನ್ ಹೇಳಿರುವುದು.. ಶಾಜಿ ಕೈಲಾಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಡುವಕ್ಕುಣ್ಣೇಲ್ ಗುರುವಚ್ಚನ್ ಎಂಬ ವ್ಯಕ್ತಿಯ ನೈಜ ಕತೆಯನ್ನಾಧರಿಸಿ ಸಿನಿಮಾ ಮಾಡಲಾಗಿದೆ. ಸದ್ಯ ಬೆಂಗಳೂರಿನಲ್ಲಿ ತಮ್ಮ ಕಡುವ ಸಿನಿಮಾ ಬಗ್ಗೆ ಮಾತನಾಡಿದ ಪೃಥ್ವಿರಾಜ್. ನಮ್ಮ ಹಿಂದಿನ ಸಿನಿಮಾ ಜನಗಣಮನ, ಕರ್ನಾಟಕದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿತ್ತು ಎಂದರು. ಹಾಗೇ ನಾನು ಮಲಯಾಳಂನಲ್ಲಿ ವಿತರಣೆ ಮಾಡಿದ ಕೆಜಿಎಫ್ ಚಾಪ್ಟರ್ 2 ಹಾಗು ಚಾರ್ಲಿ 777 ಸಿನಿಮಾ ಕೂಡ ಒಳ್ಳೆ ಕಲೆಕ್ಷನ್ ಮಾಡುವ ಮೂಲಕ ಒಳ್ಳೆ ಬ್ಯುಸಿನೆಸ್ ಆಗಿದೆ ಎಂದರು.
ಯಶ್, ಶಿವಣ್ಣ ಅವರ ಜೊತೆ ಮತ್ತು ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ ನಟಿಸಲು ಇಷ್ಟ ಪಡುತ್ತೇನೆ ಎಂದಿರುವ ನಟ ಪೃಥ್ವಿರಾಜ್ ಸುಕುಮಾರನ್.. ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಪೃಥ್ವಿರಾಜ್ ಉತ್ತರಿಸಿದರು. ಮೊದಲಿಗೆ ಕಡುವ ಸಿನಿಮಾಕ್ಕೆ ಯಾಕೇ ಡಬ್ಬಿಂಗ್ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪೃಥ್ವಿರಾಜ್, ಕನ್ನಡದ ಬಗ್ಗೆ ಹೆಚ್ಚು ಅಭಿಮಾನ ಇದೆ. ಈಗಾಗಲೇ ತೆಲುಗು, ತಮಿಳು ಭಾಷೆಗೆ ಡಬ್ಬಿಂಗ್ ಮಾಡಿದ್ದೀನಿ. ನಾನು ಶೂಟಿಂಗ್‌ಗಾಗಿ ವಿದೇಶದಲ್ಲಿದ್ದ ಕಾರಣ ಕನ್ನಡದಲ್ಲಿ ಡಬ್ಬಿಂಗ್ ಮಾಡಲಾಗಲಿಲ್ಲ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಡಬ್ಬಿಂಗ್ ಮಾಡುವುದಾಗಿ ಹೇಳಿದರು.
ಇನ್ನು ಕನ್ನಡ ಚಿತ್ರರಂಗದಲ್ಲಿ ಯಾವ ನಟನ ಜೊತೆಗೆ ಯಾವ ನಿರ್ದೇಶಕನ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ನಿಮಗೆ ಆಸಕ್ತಿ ಎಂದು ಕೇಳಿದ್ದಕ್ಕೆ, ನನಗೆ ಎಲ್ಲಾ ಸ್ಟಾರ್ಗಳ ಜೊತೆ ನಟಿಸುವ ಆಸೆ ಇದೆ. ಆದರೆ, ಒಳ್ಳೆ ಕತೆ ಇರಬೇಕು. ಅದರಲ್ಲಿ ಶಿವರಾಜ್ ಕುಮಾರ್, ಯಶ್ ಹಾಗು ರಕ್ಷಿತ್ ಶೆಟ್ಟಿಯಂತಹ ನಟರ ಜೊತೆ ಅಭಿನಯುಸುತ್ತೇನೆ. ನನಗೆ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಟಿಸಬೇಕು ಎಂಬ ಆಸೆ ಇದೆ. ಯಾಕೆಂದರೆ, ಪ್ರಶಾಂತ್ ನೀಲ್ ಇಂಡಿಯನ್ ಸಿನಿಮಾ ಮಟ್ಟದಲ್ಲಿ ತಮ್ಮ ಟ್ಯಾಲೆಂಟ್ ಏನು ಅನ್ನೋದನ್ನ ತೋರಿಸಿದ್ದಾರೆ ಎಂದರು.
ನಾನು ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಡಿ ಟೈಸನ್ ಅಂತಾ ಸಿನಿಮಾ ಮಾಡುತ್ತಿದ್ದೇನೆ. ಆ ಸಿನಿಮಾ ಥೇಟ್ ಕನ್ನಡದ ಸಿನಿಮಾದ ರೀತಿಯಲ್ಲಿ ಮೂಡಿ ಬರಲಿದೆ. ನನಗೆ ಸೂಕ್ತವೆನಿಸುವ ಕಥೆ ಸಿಕ್ಕರೆ ಕನ್ನಡದಲ್ಲಿ ಅಭಿನಯಿಸುತ್ತೇನೆ ಎಂದು ಪೃಥ್ವಿರಾಜ್ ಸುಕುಮಾರನ್ ಹೇಳಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕನ್ನಡದ ನಿರ್ದೇಶಕ ಹರಿಸಂತು