ಬೆಂಗಳೂರು: ಟಾಲಿವುಡ್ ನಟ ಪ್ರಿನ್ಸ್ ಮಹೇಶ್ ಬಾಬುಗೆ ಇಂದು ಜನ್ಮ ದಿನದ ಸಂಭ್ರಮ. ಈ ಹಿನ್ನೆಲೆ ಅವರ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸಿದ್ದಾರೆ. ಇತ್ತ ಅವರ ಬಹು ನಿರೀಕ್ಷಿತ ಚಿತ್ರ ಗುಂಟೂರು ಖಾರಂ ಚಿತ್ರ ತಂಡದಿಂದಲೂ ಮಹೇಶ್ ಬಾಬು ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಲಾಗಿದೆ. ಈಗಾಗಲೇ ತಮ್ಮ ಪೋಸ್ಟರ್, ಟೈಟಲ್ ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಚಿತ್ರತಂಡ ಅವರ ಹುಟ್ಟುಹಬ್ಬದ ಹಿನ್ನೆಲೆ ಮತ್ತೊಂದು ಹೊಸ ಪೋಸ್ಟರ್ ಬಿಡುಗಡೆ ಮಾಡುವ ಜೊತೆಗೆ ಚಿತ್ರದ ರಿಲೀಸ್ ಡೇಟ್ ಅನ್ನು ಘೋಷಿಸಿದೆ.
ಚಿತ್ರ ನಿರ್ಮಾಣ ಮಾಡುತ್ತಿರುವ ಹಾರಿಕಾ ಮತ್ತು ಹಾಸನ್ ಕ್ರಿಯೇಷನ್, ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂದಲ್ಲಿ ಗುಂಟೂರ್ ಖಾರಂ ಸಿನಿಮಾದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್ನಲ್ಲಿ ನಟ ಮಹೇಶ್ ಬಾಬುಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ಅಂದ್ರೆ 2024ರ ಜನವರಿ 12ಕ್ಕೆ ಥಿಯೇಟರ್ಗೆ ಲಗ್ಗೆ ಇಡಲಿದೆ ಎಂದು ತಿಳಿಸಿದ್ದಾರೆ.
ಚಿತ್ರದ ಆರಂಭದಲ್ಲಿ ಈ ಸಿನಿಮಾಗೆ ಎಸ್ಎಸ್ಎಂಬಿ28 ಎಂದು ಘೋಷಿಸಲಾಗಿತ್ತು. ಈ ಚಿತ್ರ 2024 ಜನವರಿ 13ರಂದು ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ, ಇದೀಗ ಗಮನಾರ್ಹ ಬದಲಾವಣೆಯಿಂದಾಗಿ ಈ ಚಿತ್ರವನ್ನು ಒಂದು ದಿನ ಮುಂಚಿತವಾಗಿಯೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಪೋಸ್ಟರ್ನಲ್ಲಿ ನಟ ಮಹೇಶ್ ಬಾಬು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಂಗಿಯ ಲುಕ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.