ಮುಂಬೈ:ಲೈಂಗಿಕ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುವ ಲೆಸ್ಬಿಯನ್, ಸಲಿಂಗಕಾಮಿಗಳು, ದ್ವಿಲಿಂಗಿ ಮತ್ತು ತೃತೀಯಲಿಂಗಿ ಸೇರಿದಂತೆ ಎಲ್ಲ ಸಮುದಾಯದವರ (LGBTQ+) ದನಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಜೂನ್ ಇಡೀ ತಿಂಗಳು 'ಪ್ರೈಡ್ ಮಾಸ' ಎಂದು ಆಚರಿಸಲಾಗುತ್ತದೆ. ಜೂನ್ 1 ರಿಂದ ಜೂನ್ 30 ರವರೆಗೆ ಈ ಸಂಭ್ರಮವನ್ನು ಆಚರಿಸಲಾಗುತ್ತದೆ. ಭಿನ್ನ ಲೈಂಗಿಕ ಅಭಿವ್ಯಕ್ತಿಯನ್ನು ಸಂಭ್ರಮಿಸುವ ಈ ಸಮುದಾಯವು ಮೆರವಣಿಗೆಯಂತಹ ಸಭೆ-ಸಮಾರಂಭಗಳನ್ನು ಮಾಡುವ ಮೂಲಕ ಆಚರಿಸುವುದು ವಾಡಿಕೆ.
ಈ ತಿಂಗಳು ಉತ್ಸವ ಮಾಡುವ ಮೂಲಕ ತಮ್ಮ ಸಮುದಾಯದ ಬಗ್ಗೆ ಅರಿವು ಸಹ ಮೂಡಸಲಾಗುತ್ತದೆ. ತಾವು ಎದುರಿಸುತ್ತಿರುವ ಅವಮಾನ, ದಬ್ಬಾಳಿಕೆಗಳನ್ನು ಬದಿಗಿಟ್ಟು ಜೂನ್ ತಿಂಗಳನ್ನು ಹೆಮ್ಮೆಯ ತಿಂಗಳು ಎಂದು ಸ್ಮರಿಸುತ್ತಾರೆ. ಇದೇ ಸಮುದಾಯವನ್ನು ಕೇಂದ್ರವಾಗಿಟ್ಟುಕೊಂಡು ಬಾಲಿವುಡ್ನ ಕೆಲವು ನಿರ್ದೇಶಕರು ಸಿನಿಮಾಗಳನ್ನು ಮಾಡಿದ್ದಾರೆ. ದೊಡ್ಡ ಪರದೆ ಮೇಲೆ ತೆರೆಕಂಡ ಹಲವು ಚಿತ್ರಗಳು ಪ್ರೇಕ್ಷಕರ ಗಮನ ಕೂಡ ಸೆಳೆದಿದೆ. ಈ ವಿಭಿನ್ನ ಸಮುದಾಯದ ವಿಶೇಷತೆ ಹೇಳುವ ಬಾಲಿವುಡ್ನ ಟಾಪ್ 5 ಸಿನಿಮಾಗಳು ಇಲ್ಲಿವೆ.
ಬಧಾಯಿ ದೋ: ಹರ್ಷವರ್ಧನ್ ಕುಲಕರ್ಣಿ ನಿರ್ದೇಶನದ ಬಧಾಯಿ ದೋ ಚಿತ್ರ ಇದೇ ಸಮುದಾಯದ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಲಿಂಗ ಸಂಬಂಧದ ಸುತ್ತ ಹೆಣೆದಿರುವ ಚಿತ್ರಕಥೆ ಇದಾಗಿದ್ದು 'ಲ್ಯಾವೆಂಡರ್ ಮದುವೆ' (ಅನುಕೂಲತೆಯ ವಿವಾಹ)ಬಗ್ಗೆ ಪ್ರಸ್ತಾಪಿಸಲಾಗಿದೆ. ಚಿತ್ರದಲ್ಲಿ ನಟ ರಾಜ್ ಕುಮಾರ್ ರಾವ್ ಅವರು ಪೊಲೀಸ್ ಪಾತ್ರದಲ್ಲಿ ನಟಿಸಿದರೆ, ಭೂಮಿ ಪೆಡ್ನೇಕರ್ ಪಿಟಿ ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಗಿಷ್ಟವಾದವರ ಜೊತೆ ಮದುವೆಯಾಗುವ ಬಗ್ಗೆಯೂ ಚಿತ್ರ ಹೇಳುತ್ತದೆ. ಪರಸ್ಪರ ಮದುವೆಯಾಗಲು ನಿರ್ಧರಿಸಿದ ಇಬ್ಬರು ಸಲಿಂಗಕಾಮಿಗಳು ಸಾಮಾಜದಲ್ಲಿ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ, ಯಾವುದಕ್ಕೆಲ್ಲ ರಾಜೀ ಮಾಡಿಕೊಳ್ಳುತ್ತಾರೆ ಅನ್ನೋದೆ ಬಧಾಯಿ ದೋ ಚಿತ್ರ.
ಅಲಿಗಢ: ಹನ್ಸಲ್ ಮೆಹ್ತಾ ನಿರ್ದೇಶನದ ಈ ಚಲನಚಿತ್ರವು 2015ರಲ್ಲಿ ಬಿಡುಗಡೆಯಾಯಿತು. ಮನೋಜ್ ಬಾಜಪೇಯಿ ನಟನೆಯ ಈ ಚಿತ್ರ ಪ್ರೊಫೆಸರ್ ರಾಮಚಂದ್ರ ಸಿರಸ್ ಅವರ ನೈಜ ಘಟನೆಯನ್ನು ಆಧರಿಸಿದೆ. ಇದು ಕೂಡ ಸಲಿಂಗಕಾಮಿಯ ಬಗ್ಗೆಯೆ ಹೇಳುತ್ತದೆ. ಪ್ರೊಫೆಸರ್ ಶ್ರೀನಿವಾಸ್ ರಾಮಚಂದ್ರ ಸಿರಸ್ ಅವರು ಓರ್ವ ಆಟೋ ಚಾಲಕನೊಬ್ಬನೊಂದಿಗೆ ಲೈಂಗಿಕ ಪ್ರೀತಿಯ ಸಂಬಂಧ ಹೊಂದಿದ್ದರಂತೆ. ಈ ಆರೋಪ ಕೇಳಿ ಬಂದ ಬಳಿಕ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಅಲಿಗಢ ಚಿತ್ರ ಇದೇ ಘಟನೆಯನ್ನು ಹೇಳುತ್ತದೆ.