ಕನ್ನಡ ಚಿತ್ರರಂಗದಲ್ಲಿ ಬಹು ಸಮಯದಿಂದ ಉತ್ತಮ ಅಭಿನಯದ ಮೂಲಕ ಸಿನಿಪ್ರಿಯರನ್ನು ರಂಜಿಸುತ್ತಾ ಬಂದಿರುವ ನಟ ಹರೀಶ್ ರಾಜ್. ಕೆಲವು ತಿಂಗಳ ಹಿಂದೆ ಅವರ ಸಿನಿ ಬದುಕಿಗೆ 25 ವರ್ಷ ತುಂಬಿದೆ. ಬೆಳ್ಳಿ ಸಂಭ್ರಮದ ಖುಷಿಯಲ್ಲಿರುವ ಹರೀಶ್ ರಾಜ್, ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ತಮ್ಮದೇ ಹರೀಶ್ ರಾಜ್ ಪ್ರೊಡಕ್ಷನ್ಸ್ನಡಿ 'ಪ್ರೇತ' ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಸ್ವತಃ ಹರೀಶ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಬಣ್ಣ ಕೂಡ ಹಚ್ಚಿದ್ದಾರೆ.
ಫಸ್ಟ್ ಲುಕ್ ಮೂಲಕ ನಿರೀಕ್ಷೆ ಮೂಡಿಸಿದ್ದ 'ಪ್ರೇತ' ಸಿನಿಮಾದ ಆಡಿಯೋ ಲಾಂಚ್ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಬೆಂಗಳೂರಿನ ಜೆಸಿ ನಗರದಲ್ಲಿ ನಡೆದ ದಸರಾ ಸಂಭ್ರಮದಲ್ಲಿ ಸಚಿವ ಬೈರತಿ ಸುರೇಶ್ ಚಿತ್ರದ ಹಾಡನ್ನು ಬಿಡುಗಡೆಗೊಳಿಸಿ ಸಿನಿಮಾ ತಂಡಕ್ಕೆ ಶುಭಹಾರೈಸಿದರು. ಈ ವೇಳೆ 'ಕಾಂತಾರ' ಖ್ಯಾತಿಯ ಸಪ್ತಮಿ ಗೌಡ ವಿಶೇಷ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದರು.
'ಪ್ರೇತ' ಸಿನಿಮಾದ 'ದೂರದ ಊರಿಗೆ..' ಎಂಬ ಹಾಡು HRP ಆಡಿಯೋ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಭಾವುಕ ಗೀತೆಗೆ ನವೀನ್ ಸಜ್ಜು ಧ್ವನಿಯಾಗಿದ್ದಾರೆ. ಪ್ರವೀಣ್ ಶ್ರೀನಿವಾಸ್ ಮೂರ್ತಿ ಟ್ಯೂನ್ ಹಾಕಿದ್ದಾರೆ. ಹರೀಶ್ ರಾಜ್ ಹಾಗೂ ಅಹಿರಾ ಶೆಟ್ಟಿ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಈ ಗಾನಬಜಾನ ಕೇಳುಗರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:ಎಸ್ತರ್ ನರೋನ್ಹಾ ಚೊಚ್ಚಲ ನಿರ್ದೇಶನದ 'ದಿ ವೆಕೆಂಟ್ ಹೌಸ್' ಸಿನಿಮಾ ನವೆಂಬರ್ 10ರಂದು ಬಿಡುಗಡೆ
ಅಭಿನಯದ ಜೊತೆಗೆ ಡೈರೆಕ್ಷನ್ನಲ್ಲಿಯೂ ಅನುಭವ ಹೊಂದಿರುವ ಹರೀಶ್ ರಾಜ್ ಅವರ 'ಹರೀಶ್ ರಾಜ್ ಪ್ರೊಡಕ್ಷನ್’ನ ಐದನೇ ಸಿನಿಮಾವೇ 'ಪ್ರೇತ'. ಈ ಪ್ರೊಡಕ್ಷನ್ ಮೂಲಕ ಈಗಾಗಲೇ ನಾಲ್ಕು ಸಿನಿಮಾಗಳು ನಿರ್ಮಾಣವಾಗಿದ್ದು, ಇದೀಗ ‘ಪ್ರೇತ’ ಸಿನಿಮಾವನ್ನು ಹರೀಶ್ ರಾಜ್ ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದಾರೆ. ಅಲ್ಲದೇ ಅವರೇ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ.
ಈವರೆಗೆ ‘ಕಲಾಕಾರ್’, ‘ಗನ್’, ‘ಶ್ರೀ ಸತ್ಯನಾರಾಯಣ’, ‘ಕಿಲಾಡಿ ಪೊಲೀಸ್’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಹರೀಶ್ ರಾಜ್ ಅವರು 3 ವರ್ಷದ ಗ್ಯಾಪ್ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ‘ಪ್ರೇತ’ ಒಂದು ಹಾರರ್ ಕಥೆಯುಳ್ಳ ಸಿನಿಮಾ. ಹರೀಶ್ ರಾಜ್ ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಹರೀಶ್ ರಾಜ್ ಜೊತೆ ಅಮೂಲ್ಯ ಭಾರದ್ವಾಜ್, ಅಹಿರಾ ಶೆಟ್ಟಿ, ಬಿ.ಎಂ. ವೆಂಕಟೇಶ್, ಅಮಿತ್ ಅವರು ಪಾತ್ರವರ್ಗದಲ್ಲಿ ಇದ್ದಾರೆ.
ಚಿತ್ರಕ್ಕೆ ಕಿರಣ್ ಆರ್.ಹೆಮ್ಮಿಗೆ ಸಂಭಾಷಣೆ ಬರೆದಿದ್ದು, ಶಿವಶಂಕರ್ ಛಾಯಾಗ್ರಹಣ ಮಾಡಿದ್ದಾರೆ. ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಜೀವನ್ ಪ್ರಕಾಶ್ ಸಂಕಲನ, ಮಂಜು ಕಲಾ ನಿರ್ದೇಶನವಿದೆ. ಈ ಸಿನಿಮಾದ ಗೀತೆಗಳಿಗೆ ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ. ವಿರಾಜಪೇಟೆ ಮತ್ತು ಮಡಿಕೇರಿ ಸುತ್ತಮುತ್ತ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಪ್ರೇತ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಪ್ರೇಕ್ಷಕರು ಮೆಚ್ಚಿಕೊಂಡ 'ಅಭಿರಾಮಚಂದ್ರ'ನಿಗೆ 25 ದಿನದ ಸಂಭ್ರಮ