ನವದೆಹಲಿ:ಚಲನಚಿತ್ರಕಲಾವಿದರು ಸಿನಿಮಾಗಳ ಮೂಲಕ ಜನರನ್ನು ಬದಲಾಯಿಸುವ ಏಜೆಂಟ್‌ಗಳಾಗುತ್ತಾರೆ ಮತ್ತು ಜಾಗೃತಿಯನ್ನು ಹರಡಲು ಸಿನಿಮಾ ಅತ್ಯಂತ ಪರಿಣಾಮಕಾರಿ ಮಾಧ್ಯಮ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ನವದೆಹಲಿಯಲ್ಲಿ ನಡೆದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು.
ಬಾಲಿವುಡ್ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಗೌರವ ಸೇರಿದಂತೆ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಖ್ಯಾತ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿದ ನಂತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಚಲನಚಿತ್ರಗಳು ಕೇವಲ ವ್ಯಾಪಾರ ಮತ್ತು ಮನರಂಜನೆಗೆ ಸೀಮಿತವಾಗಿಲ್ಲ ಎಂದರು.
"ಸಿನಿಮಾ ನಮ್ಮ ಸಮಾಜವನ್ನು ಸುಧಾರಿಸುವ ಮಾಧ್ಯಮ. ನೀವು ಕಲಾವಿದರು ಮತ್ತು ಬದಲಾವಣೆಗಳ ಏಜೆಂಟ್ಗಳು. ನೀವು ದೇಶದ ಬಗ್ಗೆ ಜನರಿಗೆ ತಿಳಿಸುವುದು ಮಾತ್ರವಲ್ಲದೆ ಅವರನ್ನು ಪರಸ್ಪರ ಸಂಪರ್ಕಿಸುತ್ತೀರಿ. ಜಾಗೃತಿ ಮತ್ತು ಸೂಕ್ಷ್ಮತೆಯನ್ನು ಹರಡಲು ಸಿನಿಮಾ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ" ಎಂದು ಹೇಳಿದರು.
ಹವಾಮಾನ ಬದಲಾವಣೆ, ಹೆಣ್ಣು ಮಕ್ಕಳ ಕಳ್ಳಸಾಗಣೆ, ಮಹಿಳೆಯರ ಮೇಲಿನ ದಬ್ಬಾಳಿಕೆ, ಭ್ರಷ್ಟಾಚಾರ ಮತ್ತು ಸಾಮಾಜಿಕ ಶೋಷಣೆಯಂತಹ ವಿವಿಧ ಸಮಸ್ಯೆಗಳನ್ನು ಈ ವರ್ಷ ಗೆದ್ದ ಚಲನಚಿತ್ರಗಳು ಜನರಿಗೆ ತೋರಿಸಿವೆ ಎಂದು ಅಭಿಪ್ರಾಯಪಟ್ಟರು. "ಬುಡಕಟ್ಟು ಸಮುದಾಯಗಳ ಪ್ರಕೃತಿ ಮತ್ತು ಕಲೆಯ ಮೇಲಿನ ಪ್ರೀತಿ, ಮಹಾತ್ಮ ಗಾಂಧಿಯವರ ಆದರ್ಶ, ಪ್ರತಿಕೂಲತೆಗಳ ನಡುವೆ ಅದಮ್ಯ ಮನೋಭಾವದಿಂದ ಹೋರಾಡುವುದು, ಶಿಕ್ಷಣದ ಪರಿವರ್ತಕ ಶಕ್ತಿ ಮತ್ತು ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗಳಂತಹ ವಿವಿಧ ವಿಷಯಗಳ ಮೇಲೆ ಉತ್ತಮ ಚಲನಚಿತ್ರಗಳನ್ನು ನಿರ್ಮಿಸಲಾಗಿದೆ" ಎಂದು ನುಡಿದರು.