ರಾಜಮೌಳಿ ನಿರ್ದೇಶನದ ಈಗ ಮತ್ತು ಬಾಹುಬಲಿ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅಶ್ವಿನ್ ಗಂಗರಾಜು ಇದೀಗ 1770 ಎಂಬ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
1770 ಸಿನಿಮಾ ಬಗ್ಗೆ ಆಫೀಶಿಯಲ್ ಆಗಿ ಅನೌನ್ಸ್ ಆಗಿದೆ. ಬಂಕಿಮ ಚಂದ್ರ ಚಟರ್ಜಿ ಅವರ ಆನಂದಮಠ ಕಾದಂಬರಿ ಆಧರಿಸಿದ ಬಹುಭಾಷಾ ಚಿತ್ರವನ್ನು ಎಸ್ಎಸ್1 ಎಂಟರ್ಟೈನ್ಮೆಂಟ್ ಮತ್ತು ಪಿಕೆ ಎಂಟರ್ಟೈನ್ಮೆಂಟ್ ಸಂಸ್ಥೆಗಳಡಿ ಶೈಲೇಂದ್ರ ಕುಮಾರ್, ಸುಜಯ್ ಕುಟ್ಟಿ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮಾ ನಿರ್ಮಿಸುತ್ತಿದ್ದಾರೆ. ಖ್ಯಾತ ಲೇಖಕ ಮತ್ತು ಚಿತ್ರನಿರ್ದೇಶಕ ರಾಮ್ ಕಮಲ್ ಮುಖರ್ಜಿ ಈ ಚಿತ್ರದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. 1770 ಮೋಷನ್ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ.
ಈ ಹಿಂದೆ ಆಕಾಶವಾಣಿ ಎಂಬ ಚಿತ್ರ ನಿರ್ದೇಶಿಸಿದ್ದ ಅಶ್ವಿನ್ ಗಂಗರಾಜು ಅವರಿಗೆ ಇದು ನಿರ್ದೇಶಕರಾಗಿ ಎರಡನೇಯ ಚಿತ್ರ. ಈ ಕುರಿತು ಮಾತನಾಡಿದ ಅವರು, ಇಂಥದ್ದೊಂದು ಅದ್ಭುತ ದೃಶ್ಯಕಾವ್ಯವನ್ನು ತೆರೆಗೆ ತರುವುದು ದೊಡ್ಡ ಸವಾಲು. ಆದರೆ ರಾಜಮೌಳಿ ಅವರ ತಂದೆ ವಿ. ವಿಜಯೇಂದ್ರ ಪ್ರಸಾದ್ ಅವರು ಕಥೆ, ಚಿತ್ರಕಥೆ ರಚಿಸುತ್ತಿರುವುದರಿಂದ ಚಿತ್ರ ಅದ್ಭುತವಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ.
ಒಬ್ಬ ನಿರ್ದೇಶಕನಾಗಿ ಬೇರೆ ಕಾಲಘಟ್ಟದ, ಎಮೋಷನ್ಗಳನ್ನು ಹೆಚ್ಚಿಸುವಂತಹ ಮತ್ತು ಆ್ಯಕ್ಷನ್ ದೃಶ್ಯಗಳಿಗೆ ಹೆಚ್ಚು ಮಹತ್ವ ಇರುವಂತಹ ಚಿತ್ರಗಳನ್ನು ನಿರ್ದೇಶಿಸಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆ. ಅದಕ್ಕೆ ಅನುಗುಣವಾಗಿ ಈ ಕಥೆಯಲ್ಲಿ ಎಲ್ಲವೂ ಇದೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಬೇಕೆನ್ನುವುದು ನಿರ್ಮಾಪಕರ ಕನಸಾಗಿದ್ದು, ಆ ಕನಸನ್ನು ನನಸು ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಪರಿಪೂರ್ಣವಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ನನಗಿದೆ ಎಂದು ತಿಳಿಸಿದರು.
ಈಗಾಗಲೇ ಅವರು ತಮ್ಮ ತಂಡದೊಂದಿಗೆ ಈ ಚಿತ್ರದ ಕುರಿತು ಸಾಕಷ್ಟು ರಿಸರ್ಚ್ ಮಾಡಿ, ಚಿತ್ರೀಕರಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬಂಕಿಮ್ ಚಂದ್ರ ಚಟರ್ಜಿ ಅವರ ಆನಂದಮಠ ಕಾದಂಬರಿಯಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಕವನವು ಪ್ರಕಟವಾಗಿತ್ತು. ಈ ಕವನವು ಬ್ರಿಟಿಷ್ ಸಾಮ್ರಾಜ್ಯವನ್ನು ಅಕ್ಷರಶಃ ನಡುಗಿಸಿತ್ತು. ವಂದೇ ಮಾತರಂ ಎನ್ನುವುದು ಬಂಕಿಮ ಚಂದ್ರರು ದೇಶವನ್ನು ಒಗ್ಗೂಡಿಸಲು ಉಚ್ಛರಿಸಿದ ಒಂದು ಮಂತ್ರ ಎನ್ನುತ್ತಾರೆ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿರುವ ವಿಜಯೇಂದ್ರ ಪ್ರಸಾದ್.