ಬೆಂಗಳೂರು: ಸ್ಟಾರ್ ಮಕ್ಕಳು ಬಣ್ಣದ ಲೋಕಕ್ಕೆ ಬರೋದು ಹೊಸತೇನಲ್ಲ. ಈಗಾಗಲೇ ಅನೇಕರು ಈ ಅದೃಷ್ಟ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಉತ್ತಮ ನಟ - ನಟಿಯರು ಆಗಿದ್ದಾರೆ. ಮತ್ತೊಂದು ಕಡೆ ಸ್ಟಾರ್ ನಟಿಯರ ಮಕ್ಕಳು ಕನ್ನಡ ಚಿತ್ರರಂಗಕ್ಕೆ ಬರೋದಕ್ಕೆ ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಮಾಲಾಶ್ರೀ ಮಗಳು ರಾಧಾ ರಾಮ್ ಚಿತ್ರರಂಗಕ್ಕೆ ಬಂದಿದ್ದು, ಇದೀಗ ನೆನಪಿರಲಿ ಪ್ರೇಮ್ ಮಗಳು ಅಮೃತಾ ಕೂಡ ಬೆಳ್ಳಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಹೌದು ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಚಿತ್ರಕ್ಕೆ ಅವರ ಕ್ಲೋಸ್ ಫ್ರೆಂಡ್ ನಾಗಭೂಷಣ್ ನಾಯಕನಾಗಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಈಗ ಆ ಚಿತ್ರಕ್ಕೆ ನಾಯಕಿ ಅಮೃತಾ ಆಯ್ಕೆ ಆಗಿದ್ದಾರೆ. ಈ ಚಿತ್ರವನ್ನು ಉಮೇಶ್ ಕೆ. ಕೃಪ ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರದ ನಾಯಕಿಯ ಪಾತ್ರಕ್ಕಾಗಿ ಚಿತ್ರತಂಡ ಹುಡುಕಾಟ ಮಾಡುತ್ತಿದ್ದ ವೇಳೆ, ಪ್ರೇಮ್ ಮಗಳ ಬರ್ತ್ ಡೇಗಾಗಿ ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದ ಫೋಟೋಗಳು ಚಿತ್ರತಂಡದ ಕಣ್ಣಿಗೆ ಬಿದ್ದಿದೆ. ಅಮೃತಾ ಫೋಟೋ ನೋಡಿದ ತಂಡ ಟಗರು ಪಲ್ಯ ಸಿನಿಮಾದಲ್ಲಿ ನಾಗಭೂಷಣ್ಗೆ ಜೋಡಿಯಾಗಿ ಅಮೃತಾ ಪಾತ್ರಕ್ಕೆ ಹೊಂದುತ್ತಾರೆ ಎಂದು ಪ್ರೇಮ್ ಅವರನ್ನು ಸಂಪರ್ಕಿಸಿದ್ದಾರೆ. ಮಗಳಿಗೆ ಇಷ್ಟವಾದರೆ ತಮಗೂ ಓಕೆ ಎಂದು ಪ್ರೇಮ್ ಸಹ ಹೇಳಿದ್ದಾರೆ. ಕಥೆ ಇಷ್ಟಪಟ್ಟ ಅಮೃತಾ, ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಪ್ರೇಮ್ ಮಗಳು ಅಮೃತಾ ಇಂಜಿನಿಯರಿಂಗ್ ಓದುತ್ತಿದ್ದಾರೆ. ಈ ಮಧ್ಯೆ ಅಮೃತಾ ನಟಿಯಾಗೋದಿಕ್ಕೆ ಬೇಕಾಗುವ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರಂತೆ. ಮುಂಬಯಿನ ಅನುಪಮ್ ಕೇರ್ ಆ್ಯಕ್ಟಿಂಗ್ ಸ್ಕೂಲ್ ನಲ್ಲಿ ಅಮೃತಾ ಆ್ಯಕ್ಟಿಂಗ್, ಡ್ಯಾನ್ಸ್, ಕಲಿತುಕೊಂಡಿದ್ದಾರೆ ಎನ್ನಲಾಗಿದೆ. ಮಾಲಾಶ್ರೀ ಮಗಳು ರಾಧಾರಾಮ್ ಹಾಗೂ ಪ್ರೇಮ್ ಮಗಳು ಅಮೃತಾ ಒಟ್ಟಿಗೆ ಅಭಿನಯದ ತರಬೇತಿ ಪಡೆದುಕೊಂಡು ಈಗ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ.
ಹಳ್ಳಿ ಹುಡುಗಿ ಪಾತ್ರದಲ್ಲಿ ಅಮೃತಾ:ಚಿತ್ರದಲ್ಲಿ ಅಮೃತಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ತಾರಾ ಮುಂತಾದವರು ಚಿತ್ರತಂಡದಲ್ಲಿದ್ದಾರೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತವಿದೆ.
ಇದನ್ನೂ ಓದಿ: ವಿವಾಹ ಸಂಭ್ರಮದಲ್ಲಿ ನಟಿ ಅದಿತಿ ಪ್ರಭುದೇವ.. ಮೆಹೆಂದಿ ಶಾಸ್ತ್ರದ ಫೋಟೋಗಳು ಇಲ್ಲಿವೆ