ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್. ತಂದೆ ಡಾ. ರಾಜ್ಕುಮಾರ್ ಹಾಕಿ ಕೊಟ್ಟ ಮಾರ್ಗದಲ್ಲಿಯೇ ನಡೆಯುತ್ತಿದ್ದಾರೆ. ಶಿವಣ್ಣ ಯಾವತ್ತೂ ರಾಜಕೀಯಕ್ಕೆ ಬಂದಿಲ್ಲ. ಆದರೆ ಸ್ನೇಹಕ್ಕೆ ಕಟ್ಟು ಬಿದ್ದು, ಪ್ರೀತಿ ವಿಶ್ವಾಸಕ್ಕೆ ಮಣಿದು ಪಕ್ಷಗಳ ಪರವಾಗಿ ಪ್ರಚಾರವನ್ನು ಈ ಹಿಂದೆಯೂ ಮಾಡಿದ್ದಾರೆ. ಅದೇ ರೀತಿ ಈ ಬಾರಿಯೂ ಪತ್ನಿ ಗೀತಾ ಶಿವ ರಾಜ್ಕುಮಾರ್ ಜೊತೆ ಸೇರಿ ಕಾಂಗ್ರೆಸ್ ಪರ ಚುನಾವಣೆ ಪ್ರಚಾರ ಮಾಡಿದರು.
ಆದರೆ ರಾಜಕೀಯ ವಿಷಯವೇ ಶಿವಣ್ಣ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆ ಮಾಡಿದೆ. ಬಿಗ್ ಬಾಸ್ ಸ್ಪರ್ಧಿ, ಪ್ರಚಾರ ಪ್ರಿಯ ಪ್ರಶಾಂತ್ ಸಂಬರಗಿ ಶಿವ ರಾಜ್ಕುಮಾರ್ ವರ್ಚಸ್ಸಿಗೆ ಧಕ್ಕೆ ತರುವಂತಹ ಮಾತಗಳನ್ನಾಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಶಿವಣ್ಣಗೆ ದುಡ್ಡಷ್ಟೇ ಮುಖ್ಯ ಎಂಬರ್ಥದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
"ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ, ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತಗೊಂಡು ಇನ್ನೊಂದು ಫಿಲ್ಮ್ಗೆ ಸೈನ್ ಮಾಡ್ಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ದರೆ ಬೆಟ್ಟ. ಇಲ್ಲ ಅಂದ್ರೆ.. ಬಂತಾ ಪ್ಯಾಕೆಟ್. ಸರಿ ಆಲ್ ರೈಟ್ ಮುಂದಕ್ಕೆ ಹೋಗೋಣ" ಎಂದು ಶಿವ ರಾಜ್ಕುಮಾರ್ ಬಗ್ಗೆ ಮಾತನಾಡಿದ್ದರು.
ಇದಕ್ಕೆ ಶಿವಣ್ಣ ಕೂಡ ಹುಬ್ಬಳ್ಳಿಯಲ್ಲಿ ಪ್ರಚಾರದ ವೇಳೆ ತಿರುಗೇಟು ನೀಡಿದ್ದರು. "ನನ್ನ ಬಳಿ ಹಣಕ್ಕೇನು ಕಡಿಮೆನಾ? ನಾನು ಮನಸಿನಿಂದ ಬಂದಿರೋದು, ಮನುಷ್ಯನಾಗಿ ಬಂದಿರೋದು. ಎಲ್ಲದಕ್ಕೂ ನಾನು ಉತ್ತರ ಕೊಡಲ್ಲ" ಎಂದು ಕೊಂಚ ಗರಂ ಆಗಿಯೇ ಹೇಳಿದ್ದರು. ಆದರೂ ಇಲ್ಲಿಗೆ ಸುಮ್ಮನಾಗದ ಪ್ರಶಾಂತ್ ಸಂಬರಗಿ, ಶಿವಣ್ಣಗೆ 10 ಪ್ರಶ್ನೆಯನ್ನು ಕೇಳಿದ್ದರು. ಕನ್ನಡಕ್ಕೆ ನಿಮ್ಮ ಕೊಡುಗೆ ಏನು ಎಂದು ಕೆಣಕಿದ್ದರು. ಧರ್ಮದ ಸುಳಿಯಲ್ಲಿ ಶಿವಣ್ಣ ಅವರನ್ನ ಸಿಲುಕಿಸುವ ಪ್ರಯತ್ನವನ್ನೂ ಮಾಡಿದ್ದರು.
ಪ್ರಶಾಂತ್ ಕೇಳಿದ ಪ್ರಶ್ನೆಗಳೇನು?:ಒಂದು ಉತ್ತಮ ಮತ್ತು ಸತ್ಯವಾದ 'ದಿ ಕೇರಳ ಸ್ಟೋರಿ' ಚಿತ್ರವನ್ನು ನಿಮ್ಮ ಕಾಂಗ್ರೆಸ್ ನಿಷೇಧಿಸುವುದಕ್ಕೆ ಮುಂದಾಗಿದೆ. ನೀವು ಕನ್ನಡದ ಮೇರು ನಟನಾಗಿ ಮತ್ತು ನಿರ್ಮಾಪನಾಗಿ ನಿಮ್ಮ ನಿಲುವೇನು? ನೀವು ಚಿತ್ರರಂಗದಿಂದ ಬಂದವರು, ಬೆಂಗಳೂರಿನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಪ್ರದರ್ಶಿಸಿದಾಗ ಕಾಂಗ್ರೆಸ್ ಅದಕ್ಕೆ ವಿರೋಧ ಪಡಿಸಿತ್ತು. ಆಗ ಏಕೆ ನಿಮ್ಮ ದಿವ್ಯ ಮೌನ?
ಕನ್ನಡಿಗರ ಪರವಾಗಿದ್ದ ಕನ್ನಡ ಡಬ್ಬಿಂಗ್ ವಿರೋಧಿಸಿ ಈಗ ಅನ್ಯ ಭಾಷೆಯ ಚಿತ್ರದಲ್ಲಿ ನಟಿಸುತಿದ್ದೀರಾ. ಇದು ಸರಿನಾ? ಡಾ ರಾಜಕುಮಾರ್ ನಮ್ಮ ಆರಾಧ್ಯ ದೈವ ಮತ್ತು ರಾಜಕೀಯದಿಂದ ದೂರವಾಗಿದ್ದರು ಗೋಕಾಕ್ ಚಳುವಳಿ ಮತ್ತು ಅವರ ಕನ್ನಡ ಪರ ಹೋರಾಟ ಎಲ್ಲರಿಗೂ ಗೊತ್ತಿರುವ ವಿಚಾರ, ಅವರ ಮಗನಾಗಿ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? 2020 ರಲ್ಲಿ ಸ್ಯಾಂಡಲ್ವುಡ್ ಡ್ರಗ್ ವಿಷಯದಲ್ಲಿ ನೀವು ಏಕೆ ಮೌನವಾಗಿದ್ದಿರಿ? ಕರ್ನಾಟಕವನ್ನು ಮಾದಕ ಮುಕ್ತ ಮಾಡಲು ನಮ್ಮ ಯುವ ಜನರಿಗೆ ತಮ್ಮ ಸಂದೇಶವೇನು? ಪಿಎಫ್‌ಐ ಮತ್ತು ಜಿಹಾದಿ ಜನರಿಂದ ಆರ್‌ಎಸ್‌ಎಸ್ ಹಿಂದೂ ಕಾರ್ಯಕರ್ತರ ಹತ್ಯೆಗಳ ಬಗ್ಗೆ ನಿಮ್ಮ ನಿಲುವು ಏನು? ನಿಮ್ಮ ಎಲ್ಲಾ ಚಿತ್ರದಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುವ ಪಾತ್ರ ಮಾಡುವ ತಾವು ಲವ್ ಜಿಹಾದ್ ಮೇಲೆ ನಿಮ್ಮ ನಿಲುವೇನು? ಎನ್ನುವುದು ಸೇರಿದಂತೆ ಪ್ರಶ್ನೆಗಳನ್ನು ಹಾಕಿ ಇದರ ಬಗ್ಗೆ ತಮ್ಮ ಅಭಿಪ್ರಾಯ? ಹಿಂದೂಗಳು ನಿಮ್ಮ ಚಿತ್ರವನ್ನು ನೋಡಬಾರದಾ? ಎಂದು ಕೇಳಿದ್ದರು.
ಹೀಗೆ ಒಂದಲ್ಲ, ಎರಡಲ್ಲ, ಹತ್ತು ಪ್ರಶ್ನೆಯನ್ನು ಕೇಳಿದ್ದ ಪ್ರಶಾಂತ್ ಸಂಬರಗಿ ಇದೀಗ ನನಗೆ ಯಾವ ಉತ್ತರವೂ ಬೇಡವೆಂದಿದ್ದಾರೆ. ವರಸೆ ಬದಲಿಸಿ ಆ 10 ಪ್ರಶ್ನೆ ಡಿಲೀಟ್ ಮಾಡಿದ್ದಾರೆ. ನೇರವಾಗಿ ಕ್ಷಮೆ ಕೇಳದೇ ಇದ್ದರೂ ನನ್ನ ಮಾತನ್ನ ಹಿಂಪಡೆಯುತ್ತೇನೆ ಎಂದಿದ್ದಾರೆ. "ಶಿವಣ್ಣ ಮತ್ತೆ ಇನ್ನೊಬ್ಬ ನಮ್ಮ ಆಪ್ತಮಿತ್ರನೊಂದಿಗೆ ಇದೀಗ ತಾನೇ ಮಾತನಾಡಿದೆ. ಶಿವಣ್ಣ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಶಿವಣ್ಣ ಅವರ ತಂದೆಯ ಬಯಕೆಯಂತೆ ರಾಜಕೀಯದಿಂದ ದೂರ ಇದ್ದಾರೆ. ನಾನು ಅವರ ಬಗ್ಗೆ ಬರೆದಿರುವ ನನ್ನ ಪೋಸ್ಟ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಮತ್ತು ಶಿವಣ್ಣ ಮತ್ತು ಅವರ ಅಭಿಮಾನಿಗಳಿಗೆ ಕರ್ನಾಟಕದಾದ್ಯಂತ ನೋಯಿಸಬಾರದು ಎಂದು ನಾನು ಬಯಸುತ್ತೇನೆ" ಎಂದು ಪ್ರಶಾಂತ್ ಸಂಬರಗಿ ಇದೀಗ ಉಲ್ಟಾ ಹೊಡೆದಿದ್ದಾರೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲೂ 'ದಿ ಕೇರಳ ಸ್ಟೋರಿ' ಪ್ರದರ್ಶನ ರದ್ದು: ಶಾಂತಿ ಕಾಪಾಡಲು ಈ ನಿರ್ಧಾರ ಎಂದ ಸಿಎಂ