ಬಾಲಿವುಡ್ನ ಸೂಪರ್ಸ್ಟಾರ್ಗಳಾದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹು ನಿರೀಕ್ಷಿತ ಪಠಾಣ್ ಚಿತ್ರದ 'ಬೇಷರಮ್ ರಂಗ್' ಹಾಡು ಸೋಮವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ದೀಪಿಕಾ ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದ್ದಾರೆ. ಹಿಂದೆಂದೂ ತೆರೆ ಮೇಲೆ ಕಾಣದ ರೀತಿಯಲ್ಲಿ ಪಡುಕೋಣೆ ಅವರನ್ನು ಪ್ರಸ್ತುತಪಡಿಸಲಾಗಿದೆ. ಹಾಡಿನ ಕೊನೆಯಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿಕೊಂಡು ಕುಣಿದಿದ್ದು, ಇದಕ್ಕೆ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ.
ನಿನ್ನೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ಬೇಷರಂ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರ ವೇಷಭೂಷಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ನರೋತ್ತಮ್ ಮಿಶ್ರಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿರುವ ನಟ ಪ್ರಕಾಶ್ ರಾಜ್, ಇನ್ನೂ ಎಷ್ಟು ದಿನ ನಾವು ಇಂತಹ ಅಂಧಭಕ್ತರನ್ನು ಸಹಿಸಿಕೊಳ್ಳಬೇಕು? ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. 'ಬಣ್ಣದ ಕುರುಡು’ ಎಂದು ವ್ಯಂಗ್ಯವಾಡಿದ್ದಾರೆ.
ಹಾಗಾದರೆ ಕೇಸರಿ ವಸ್ತ್ರಧಾರಿಗಳು ಅತ್ಯಾಚಾರ, ದ್ವೇಷ ಭಾಷಣ, ರಾಜಕೀಯ ನಾಯಕರು ಭ್ರಷ್ಟಾಚಾರ, ದಂಧೆ ನಡೆಸಿದರೂ ಪರವಾಗಿಲ್ಲ. ಸಿನಿಮಾದಲ್ಲಿ ಕೇಸರಿ ಬಟ್ಟೆ ಬಳಸಿದರೆ ತಪ್ಪೇ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಪಠಾಣ್ ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನಕಾರರು ಇಂದೋರ್‌ನಲ್ಲಿ ಎಸ್‌ಆರ್‌ಕೆ ಪ್ರತಿಕೃತಿಯನ್ನು ಸುಟ್ಟುಹಾಕಿದ್ದನ್ನು ಈ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.