ಕಾವೇರಿ ಕಿಚ್ಚು ಹೆಚ್ಚಾಗಿದೆ. ಹೋರಾಟಗಳು ಮುಂದುವರೆದಿದೆ. ಕನ್ನಡ ತಾರೆಯರು ಸಹ ಕಾವೇರಿಗಾಗಿ ದನಿ ಎತ್ತಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ಇಂದು ಕರ್ನಾಟಕ ಬಂದ್ ಆಗಿದೆ. ತಮಿಳು ನಟ ಸಿದ್ಧಾರ್ಥ್ ಅವರ ಮೇಲೂ ಕಾವೇರಿ ಕಾವು ತಟ್ಟಿದ್ದು, ಕನ್ನಡಿಗರ ಪರವಾಗಿ ನಟ ಪ್ರಕಾಶ್ ರಾಜ್ ಕ್ಷಮೆಯಾಚಿಸಿದ್ದಾರೆ.
ಕನ್ನಡಿಗರ ಪರವಾಗಿ ಕ್ಷಮೆಯಾಚಿಸಿದ ಪ್ರಕಾಶ್ ರಾಜ್:ಗುರುವಾರದಂದು ತಮಿಳು ನಟ ಸಿದ್ಧಾರ್ಥ್ ಅವರು ತಮ್ಮ ಚಿತ್ತ (Chithha) ಸಿನಿಮಾ ಪ್ರಮೋಶನ್ ಸಲುವಾಗಿ ಬೆಂಗಳೂರಿಗೆ ಆಗಮಿಸಿದ್ದರು. ಮಲ್ಲೇಶ್ವರಂನ ಎಸ್ಆರ್ವಿ ಥಿಯೇಟರ್ನಲ್ಲಿ ಸಿನಿಮಾ ಸಂಬಂಧ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಆದ್ರೆ ಅಲ್ಲಿಗೆ ಆಗಮಿಸಿದ ಕನ್ನಡಪರ ಹೋರಾಟಗಾರರು ತಮಿಳು ಸಿನಿಮಾ ಪ್ರೆಸ್ಮೀಟ್ಗೆ ವಿರೋಧ ವ್ಯಕ್ತಪಡಿಸಿದ್ದರು. ತಮಿಳು ತಾರೆಯ ಸಿನಿಮಾ ಪ್ರಚಾರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದ ಹಿನ್ನೆಲೆ, ನಟ ಸಿದ್ಧಾರ್ಥ್ ಅವರಲ್ಲಿ ಕನ್ನಡಿಗರ ಪರವಾಗಿ ನಟ, ರಾಜಕಾರಣಿ ಪ್ರಕಾಶ್ ರಾಜ್ ಕ್ಷಮೆಯಾಚಿಸಿದ್ದಾರೆ. ಪ್ರತಿಭಟನಾಕಾರರು ಕಲಾವಿದರನ್ನು ನಿಂದಿಸುವ ಬದಲಾಗಿ ಚುನಾಯಿತ ಅಧಿಕಾರಿಗಳಲ್ಲಿ ದೂರು ಸಲ್ಲಿಸಬೇಕು ಎಂದು ಸಾಮಾಜಿಕ ಜಾಲತಾಣ X (ಹಿಂದಿನ ಟ್ವಿಟರ್) ನಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಮನವಿ ಮಾಡಿದ್ದಾರೆ.
ಪ್ರಕಾಶ್ ರಾಜ್ ಟ್ವೀಟ್: ತಮಿಳು ನಟ ಸಿದ್ಧಾರ್ಥ್ ಅವರ ಪ್ರೆಸ್ಮೀಟ್ಗೆ ಸಂಬಂಧಿಸಿದ ವಿಡಿಯೋವನ್ನು ಎಕ್ಸ್ನಲ್ಲಿ ಶೇರ್ ಮಾಡಿರುವ ನಟ ಪ್ರಕಾಶ್ ರಾಜ್, ''ಕಾವೇರಿ ನಮ್ಮದು. ಹೌದು, ನಮ್ಮದೇ. ಆದರೆ, ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು, ನಾಯಕರನ್ನು ಪ್ರಶ್ನಿಸದೇ..... ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೇ.. ಹೀಗೆ ಅಸಹಾಯಕ ಜನಸಾಮಾನ್ಯರನ್ನು, ಕಲಾವಿದರನ್ನು ಹಿಂಸಿಸುವುದು ತಪ್ಪು. ಒಬ್ಬ ಕನ್ನಡಿಗನಾಗಿ ಸಹ್ರುದಯ ಕನ್ನಡಿಗರ ಪರವಾಗಿ ಸಿದ್ಧಾರ್ಥ್ ಅವರೇ ಕ್ಷಮಿಸಿ'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೈಮುಗಿಯುವ ಎಮೋಜಿಯನ್ನೂ ಹಾಕಿದ್ದಾರೆ.