ಬೆಂಗಳೂರು: ಕೆಲ ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಜೊತೆಗೆ ಸಿನಿ ಪ್ರಿಯರಿಂದ ಹಿಡಿದು ಸಿನಿಮಾ ವಿಮರ್ಶಕರವರೆಗೆ ಅಪಾರ ಮೆಚ್ಚುಗೆ ಪಡೆಯುತ್ತಿರುವ ಚಿತ್ರ ಡೇರ್ ಡೆವಿಲ್ ಮುಸ್ತಾಫಾ. ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದ್ದು, ರಾಜ್ಯ ಅಲ್ಲದೆ ವಿದೇಶಗಳಲ್ಲಿಯೂ ಮೆಚ್ಚುಗೆ ಪಡೆದು ಡೇರ್ ಡೆವಿಲ್ ಮುಸ್ತಾಫ ಒಟ್ಟು ಯಶಸ್ವಿ 25 ದಿನಗಳನ್ನು ಪೂರೈಯಿಸಿದೆ.
ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿರುವ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಬಹುಭಾಷೆ ನಟ ಪ್ರಕಾಶ್ ರೈ ನೋಡಿ ಮೆಚ್ಚಿಕೊಂಡಿದ್ದಾರೆ.
ಹೌದು ನಟ ಪ್ರಕಾಶ್ ರೈ ಡೇರ್ ಡೆವಿಲ್ ಮುಸ್ತಫಾ ಚಿತ್ರದ ಕಥೆಯಿಂದ ಹಿಡಿದು, ಸಂಗೀತ, ನಿರ್ದೇಶನ ಅಲ್ಲದೇ ಯುವ ಕಲಾವಿದರ ಅಭಿನಯದ ಬಗ್ಗೆ ಕೊಂಡಾಡಿದ್ದಾರೆ. ಇನ್ನು ಪೂರ್ಣಚಂದ್ರ ತೇಜಸ್ವಿಯವರು ಹಾಗೂ ಕುವೆಂಪು ಅವರು ನಮಗೆ ಕನ್ನಡದ ಬಗ್ಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಈ ಸಿನಿಮಾವನ್ನು ನಮ್ಮಂಥ ನಟರುಗಳು ಮಾಡಬೇಕಾದ ಚಿತ್ರ.
ಇಂತಹ ಸಿನಿಮಾವನ್ನು ಯುವ ನಟರು ಅಭಿನಯಿಸುವ ಮೂಲಕ ಸಮಾಜದಲ್ಲಿ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸಿದ್ದು, ಅವರ ಪ್ರಯತ್ನವನ್ನು ಎಲ್ಲರೂ ಮೆಚ್ಚವಂಥದ್ದು ಎಂದು ಪ್ರಕಾಶ್ ರೈ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ಪೂರ್ಣ ಚಂದ್ರ ತೇಜಸ್ವಿ ಪ್ರಪಂಚದಲ್ಲಿ ಪಯಣಿಸಿರುವ ಪ್ರೇಕ್ಷಕ ಪ್ರಭು, ಇದು ಹೃದಯ ಬೆಸೆಯುವ ಕಥೆ. ಪ್ರತಿಯೊಬ್ಬರು ಇಂತಹ ಚಿತ್ರ ಮಿಸ್ ಮಾಡದೇ ನೋಡಬೇಕು ಎಂದು ಅಭಿಪ್ರಾಯ ಪಟ್ಟರು.