ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರು ಡೈರೆಕ್ಟರ್ ಆಗೋದು ಹೊಸತೇನಲ್ಲ. ಇದೀಗ ಸ್ಯಾಂಡಲ್ವುಡ್ನ ಬಹುತೇಕ ಸ್ಟಾರ್ ನಟರ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಅವರು ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯ "ಚೀತಾ" ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಕನ್ನಡ ರಾಜ್ಯೋತ್ಸವದ ಶುಭ ದಿನದಂದು ಹೆಚ್ ಎಂ ಟಿ ಶಾಲೆ ಆಟದ ಮೈದಾನದಲ್ಲಿ ಚೀತಾ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ನಟ ಪ್ರಜ್ವಲ್ ದೇವರಾಜ್ ಕನ್ನಡ ಬಾವುಟ ಹಾರಿಸೋ ಮೂಲಕ ತಮ್ಮ ಚಿತ್ರಕ್ಕೆ ಚಾಲನೆ ನೀಡಿದರು.
ಕಳೆದ 23 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸರ್ ಆಗಿ, ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಮಾತು ಶುರು ಮಾಡಿದ ರಾಜ ಕಲೈ ಕುಮಾರ್ ಅವರು, ಇದು ನನ್ನ ನಿರ್ದೇಶನದ ಚೊಚ್ಚಲ ಚಿತ್ರ. ಪ್ರಜ್ವಲ್ ಅವರ 39ನೇ ಚಿತ್ರವನ್ನು ನಾನು ನಿರ್ದೇಶಿಸುತ್ತಿದ್ದೇನೆ. ಈ ಚಿತ್ರದ ಕುರಿತು ಹೇಳುವುದಾದರೆ, ಇದೊಂದು ಮಾರ್ಕೆಟ್ನಲ್ಲಿ ನಡೆಯುವ ಕಥೆ. ಮಾರ್ಕೆಟ್ನಲ್ಲಿನ ವ್ಯಾಪಾರ, ವಹಿವಾಟು ಹಾಗೂ ಅಲ್ಲಿ ಕೆಲಸ ಮಾಡುವವರು ಎಲ್ಲಾ ಸೂಪರ್ ಫಾಸ್ಟ್. ನಮ್ಮ ಚಿತ್ರದ ನಾಯಕ ಕೂಡ ಚಿರತೆಯಷ್ಟೇ ವೇಗದವನು. ಹಾಗಾಗಿ ನಮ್ಮ ಚಿತ್ರಕ್ಕೆ "ಚೀತಾ" ಎಂದು ಹೆಸರಿಟ್ಟಿದ್ದೇವೆ. ಕಲಾ ನಿರ್ದೇಶಕ ಶಿವು ಅವರು ಅದ್ಧೂರಿ ಮಾರ್ಕೆಟ್ ಸೆಟ್ ನಿರ್ಮಾಣ ಮಾಡುತ್ತಿದ್ದಾರೆ. ಆ ಸೆಟ್ನಲ್ಲೇ ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದೆ. ಶೃತಿ ಹರಿಹರನ್, ಗುರುರಾಜ್ ಜಗ್ಗೇಶ್, ಶಿವರಾಜ ಕೆ ಆರ್ ಪೇಟೆ, ತೆಲುಗು ನಟ ಸುನೀಲ್, ಗೋವಿಂದೇ ಗೌಡ, ಅಭಯ್ ಪುನೀತ್ ಸೇರಿದಂತೆ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ಕಲೈ ಮಾಸ್ಟರ್ ನೃತ್ಯ ನಿರ್ದೇಶಕರಾದಾಗ ನೃತ್ಯ ಸಂಯೋಜಿಸಿದ ಮೊದಲ ಗೀತೆಗೂ ನಾನೇ ನಾಯಕನಾಗಿದ್ದೆ. ಈಗ ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರಕ್ಕೂ ನಾನೇ ನಾಯಕ. ನಿರ್ದೇಶಕರು ಒಳ್ಳೆ ಕಥೆ ರೆಡಿ ಮಾಡಿಕೊಂಡಿದ್ದಾರೆ. ಮಾರ್ಕೆಟ್ನಲ್ಲೇ ಹುಟ್ಟಿ, ಅಲ್ಲೇ ಬೆಳೆಯುವ ಹುಡುಗನ ಪಾತ್ರ ನನ್ನದು, ತುಂಬಾ ಚೆನ್ನಾಗಿದೆ ಎಂದು ತಿಳಿಸಿದರು.