ಬೆಂಗಳೂರು: ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ವೀರಂ ಸಿನಿಮಾದ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಪ್ರಸನ್ನ ಥಿಯೇಟರ್ನಲ್ಲಿ ಸಾವಿರಾರು ಪ್ರೇಕ್ಷಕರ ನಡುವೆ ಚಿತ್ರತಂಡ ಟ್ರೈಲರ್ ಅನ್ನು ಡೈನಾಮಿಕ್ ಸ್ಟಾರ್ ದೇವರಾಜ್ ರಿಲೀಸ್ ಮಾಡಿದ್ದಾರೆ. ಈ ಚಿತ್ರ ಇದೇ ಏಪ್ರಿಲ್ 7 ರಂದು ಥಿಯೇಟರ್ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನಿರ್ಮಾಪಕ ಕೆ.ಎಂ. ಶಶಿಧರ್ ಅವರು ತಮ್ಮ ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್‌ನ ಮೂಲಕ ನಿರ್ಮಿಸಿದ್ದಾರೆ. ಖದರ್ ಕುಮಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ವೀರಂ ವಿಶೇಷತೆ: ವೀರಂ ಚಿತ್ರದಲ್ಲಿ ಪ್ರಿನ್ಸ್ ಪ್ರಜ್ವಲ್ ದೇವರಾಜ್ಗೆ ಅಕ್ಕನಾಗಿ ಇದೇ ಮೊದಲ ಬಾರಿಗೆ ನಟಿ ಶೃತಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಾಹಸ ಸಿಂಹನ ಅಭಿಮಾನಿಯಾಗಿ ಪ್ರಜ್ವಲ್ ಕಂಡಿರುವುದು ವಿಶೇಷ. ಈ ಚಿತ್ರಕ್ಕಾಗಿ ಪ್ರಜ್ವಲ್ ವಿಷ್ಣುವರ್ಧನ್ ಅವರ ಹಚ್ಚೆಯನ್ನು ಹಾಕಿಸಿಕೊಂಡಿರುವುದು ವಿಶೇಷ. ಇನ್ನು ನಟಿ ರಚಿತಾ ರಾಮ್ ಚಿತ್ರದ ನಾಯಕಿಯಾಗಿದ್ದಾರೆ. ಇದು ಅಕ್ಕ- ತಮ್ಮನ ಭಾವನಾತ್ಮಕ ಸಿನಿಮಾ ಎನ್ನಲಾಗಿದೆ.
ಚಿತ್ರದ ವಿಶೇಷತೆ:ಯಂಗ್ ಸ್ಟರ್ಸ್ಗಳಿಂದಲೇ ತುಂಬಿರುವ ಈ ಚಿತ್ರ ಪಕ್ಕಾ ಮಾಸ್ ಚಿತ್ರವಾಗಿದೆ. ಶಿಶ್ಯ ದೀಪಕ್ ಅವರು ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದು, ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕೂಡ ಮಿಂಚಿದ್ದಾರೆ. ಚಿತ್ರಕ್ಕೆ ಅನೂಪ ಸೀಳನ್ ಅವರ ಸಂಗೀತ ಸಂಯೋಜನೆ, ಲವಿತ್ ಅವರ ಛಾಯಗ್ರಹಣ ಇದೆ. ಚಿತ್ರದಲ್ಲಿ ಬಲ ರಾಜವಾಡಿ, ಅಚ್ಯುತ್‌ಕುಮಾರ್, ಸ್ವಾತಿ, ಮೈಕೋ ನಾಗರಾಜ್, ಪ್ರಶಾಂತ್ ನಟನಾ, ಹನುಮಂತೇಗೌಡ ಅಲ್ಲದೆ ನಿರ್ದೇಶಕರಾದ ಜೋಸೈಮನ್, ವಿ.ನಾಗೇಂದ್ರಪ್ರಸಾದ್ ಹೀಗೆ ಬಹುದೊಡ್ಡ ತಾರಾಗಣವೇ ಇದೆ.
ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ದೇವರಾಜ್ ಅವರು, ವೀರಾವೇಶದೊಂದಿಗೆ ಭಾವನಾತ್ಮಕತೆ ಇರುವ ಸಿನಿಮಾ ಇದಾಗಿದೆ. ಥಿಯೇಟರ್ನಲ್ಲಿ ಟ್ರೈಲರ್ ನೋಡಿದ್ದು ನನಗೆ ಮೊದಲ ಅನುಭವ, ಜನರ ಕೂಗಾಟ, ಚಪ್ಪಾಳೆ ಕೇಳಿ ತುಂಬಾ ಖುಷಿಯಾಯ್ತು ಎಂದು ಹೇಳಿದರು. ನಟ ಶೃತಿ ಮಾತನಾಡಿ, ಈ ಸಿನಿಮಾ ನನಗೆ ತುಂಬಾ ವಿಶೇಷ, ಏಕೆಂದರೆ ನಾನು ವಿಷ್ಣು ಸರ್ ಅಭಿಮಾನಿಯಾಗಿಯೇ ಬಂದವಳು, ಇದರಲ್ಲೂ ಅದೇಥರದ ಪಾತ್ರವಿದೆ, ಫಸ್ಟ್ ಟೈಮ್ ಪ್ರಜ್ವಲ್ ಅವರ ಅಭಿನಯ ನೋಡಿ ಕಣ್ಣಲ್ಲಿ ನೀರುಬಂತು ಎಂದರು.