ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಹೆಚ್ಚು ನಿರ್ಮಾಣವಾಗುತ್ತಿದೆ. ಆ ಪೈಕಿ ಬಹುತೇಕ ಸಿನಿಮಾಗಳು ಗೆಲುವು ಕಾಣುವಲ್ಲಿ ಯಶಸ್ವಿಯಾಗುತ್ತಿದೆ. ಇದೀಗ ಕುಂಬರಾಶಿ ಸಿನಿಮಾ ಖ್ಯಾತಿಯ ಚೇತನ್ ಚಂದ್ರ ಅಭಿನಯದ 'ಪ್ರಭುತ್ವ' ಚಿತ್ರ ಸ್ಯಾಂಡಲ್ವುಡ್ನಲ್ಲಿ ಕೆಲ ವಿಚಾರಗಳಿಗೆ ಸಖತ್ ಸೌಂಡ್ ಮಾಡುತ್ತಿದೆ.
ರಾಜ್ಯ ವಿಧಾನಸಭೆ ಚುನಾವಣೆಯ ಹೊತ್ತಿನಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಕಥಾಹಂದರ ಹೊಂದಿರುವ ಪ್ರಭುತ್ವ ಸಿನಿಮಾ ಬಿಡುಗಡೆಗೂ ಮುಂಚೆ ನಿರ್ಮಾಪಕರ ಜೇಬು ತುಂಬಿಸುತ್ತಿದೆ. ಟ್ರೇಲರ್ನಿಂದಲೇ ಸಿನಿ ಪ್ರಿಯರ ಮನಸ್ಸು ಕದ್ದಿರುವ ಪ್ರಭುತ್ವ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟ ಆಗಿರೋದು ಚಿತ್ರತಂಡಕ್ಕೆ ಮತ್ತಷ್ಟು ಎನರ್ಜಿ ತಂದಿದೆ. ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ಅಲ್ಟ್ರಾ ಎಂಬ ನಿರ್ಮಾಣ ಸಂಸ್ಥೆ ಭಾರಿ ಮೊತ್ತಕ್ಕೆ ಈ ಚಿತ್ರದ ಡಬ್ಬಿಂಗ್ ರೈಟ್ಸ್ ಖರೀದಿಸಿದೆ. ಎಷ್ಟು ಎಂದು ತಿಳಿದುಕೊಳ್ಳೋಕು ಮುನ್ನ ಈ ಪ್ರಭುತ್ವ ಚಿತ್ರದ ಒಂದಿಷ್ಟು ಹೈಲೆಟ್ಸ್ ಗಮನಿಸೋಣ.
ಪ್ರತಿಯೊಬ್ಬ ಪ್ರಜೆ ಈ ಚಿತ್ರವನ್ನು ನೋಡಬೇಕು. ಮತದಾನ ಅಮೂಲ್ಯವಾದದ್ದು, ಹಾಗಾಗಿ ಮತದಾನವನ್ನು ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವ ಸಾರುವ ಕಥೆಯನ್ನು 'ಪ್ರಭುತ್ವ' ಚಿತ್ರ ಒಳಗೊಂಡಿದೆ. ಮೇಘಡಹಳ್ಳಿ ಶಿವಕುಮಾರ್ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಚೇತನ್ ಚಂದ್ರ ಕಳ್ಳ ಮತದಾನದ ವಿರುದ್ಧ ಧ್ವನಿ ಎತ್ತುವ ಕಾಮನ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಚೇತನ್ ಚಂದ್ರ ಅಭಿನಯಿಸುತ್ತಿರುವ 12ನೇ ಸಿನಿಮಾ ಇದು. ಹೀಗಾಗಿ ಚೇತನ್ ಚಂದ್ರ ತಮ್ಮ ಮುಂದಿನ ಈ ಚಿತ್ರದ ಮೂಲಕ ಕನ್ನಡಿಗರ ಮನಸ್ಸು ಗೆಲ್ಲಲು ಪಣ ತೊಟ್ಟಿದ್ದಾರೆ.
ಚಿತ್ರದ ಯಶಸ್ಸಿಗೆ ಪೂರ್ಣ ಪ್ರಮಾಣದ ಶ್ರಮ ಹಾಕುತ್ತಿದ್ದಾರೆ. ಪರಿಣಾಮ, ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ಅಲ್ಟ್ರಾ ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಬರೋಬ್ಬರಿ 2 ಕೋಟಿಗೂ ಹೆಚ್ಚು ರೂಪಾಯಿ ಕೊಟ್ಟು ಹಿಂದಿ ಡಬ್ಬಿಂಗ್ ರೈಟ್ಸ್ ಅನ್ನು ಖರೀದಿಸಿದೆ. ನಟ ಚೇತನ್ ಚಂದ್ರ ಸಿನಿಮಾ ಕೆರಿಯರ್ನಲ್ಲಿ ದೊಡ್ಡ ಮೊತ್ತಕ್ಕೆ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್ ಆಗಿರುವ ಮೊದಲ ಚಿತ್ರ ಇದು ಎಂದು ಹೇಳಲಾಗಿದೆ.