ಭಾರತೀಯ ಚಿತ್ರರಂಗದ ನಿರ್ದೇಶಕ, ನೃತ್ಯ ನಿರ್ದೇಶಕ, ನರ್ತಕ ಪ್ರಭು ದೇವ ಮತ್ತು ಪತ್ನಿ ಡಾ. ಹಿಮಾನಿ ಸಿಂಗ್ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. 'ಇಂಡಿಯನ್ ಮೈಕಲ್ ಜಾಕ್ಸನ್' ಖ್ಯಾತಿಯ ಪ್ರಭು ದೇವ ಮನೆಗೆ ಲಕ್ಷ್ಮಿಯ ಎಂಟ್ರಿ ಆಗಿದೆ.
ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೇನೆ:50ರ ಹರೆಯದಲ್ಲಿ ತಂದೆಯಾದ ಸಂತಸದ ಸುದ್ದಿಯನ್ನು ನೃತ್ಯ ನಿರ್ದೇಶಕ ಪ್ರಭು ದೇವ ಸೋಮವಾರ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೌದು ನಿಜ. 50ರ ಹರೆಯದಲ್ಲಿ ಮತ್ತೊಮ್ಮೆ ತಂದೆಯಾಗಿದ್ದೇನೆ. ನನಗೆ ಬಹಳ 'ಸಂತೋಷ ಮತ್ತು ಸಂಪೂರ್ಣ' ಎನ್ನುವ ಅನುಭವ ಆಗುತ್ತಿದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನನ್ನ ಕೆಲಸದ ಹೊರೆ ಕಡಿಮೆ ಮಾಡಿದ್ದೇನೆ ಎಂದು ಪ್ರಭು ದೇವ ತಿಳಿಸಿದರು.
ಮೊದಲ ಪತ್ನಿ ರಮ್ಲತಾ ಅವರಿಗೆ ವಿಚ್ಛೇದನ ನೀಡಿದ ಒಂಬತ್ತು ವರ್ಷಗಳ ನಂತರ ಪ್ರಭು ದೇವ ಅವರು 2020ರಲ್ಲಿ ಡಾ. ಹಿಮಾನಿ ಅವರೊಂದಿಗೆ ದಾಂಪತ್ಯ ಜೀವನ ಶುರು ಮಾಡಿದರು. ಅವರು ತಮ್ಮ ಮೊದಲ ಪತ್ನಿಯೊಂದಿಗೆ ಮೂರು ಮಕ್ಕಳನ್ನು ಹೊಂದಿದ್ದರು. ಆ ಪೈಕಿ ಮೊದಲ ಮಗ 2008ರಲ್ಲಿ ಬ್ರೈನ್ ಟ್ಯೂಮರ್‌ನಿಂದ ನಿಧನರಾದರು. ಇತರ ಇಬ್ಬರು ಗಂಡು ಮಕ್ಕಳು ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ.
ನಿರ್ದೇಶಕ ಮತ್ತು ಅವರ ಪತ್ನಿ ಹಿಮಾನಿ ಇದುವರೆಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. 2023ರ ಏಪ್ರಿಲ್ನಲ್ಲಿ, ಅವರ 50ನೇ ಹುಟ್ಟುಹಬ್ಬದ ಸ್ಮರಣಾರ್ಥ ವಿಡಿಯೋವೊಂದರಲ್ಲಿ ಕಾಣಿಸಿಕೊಂಡರು. ವಿಡಿಯೋದಲ್ಲಿ ಪ್ರಭುದೇವ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.