ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೆಸರಿಡದ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ತಮಿಳು ನಟ ಪ್ರಭುದೇವ ಇದೇ ಮೊದಲ ಬಾರಿಗೆ ಶಿವಣ್ಣನ ಜೊತೆ ಸಿನಿಮಾ ಮಾಡ್ತಿರೋದು ವಿಶೇಷ. ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ, ರಾಕ್‌ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಾಕ್‌ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಪ್ರೊಡಕ್ಷನ್ ನಂ 47 ಚಿತ್ರ ಇದಾಗಿದೆ. ಇಂದು ಚಿತ್ರದ ಮುಹೂರ್ತ ಸಮಾರಂಭ ರಾಕ್‌ಲೈನ್ ಸ್ಟುಡಿಯೋದಲ್ಲಿ ನಡೆಯಿತು. ಮೊದಲ ಸನ್ನಿವೇಶಕ್ಕೆ ಗೀತಾ ಶಿವರಾಜ್ಕುಮಾರ್ ಆರಂಭ ಫಲಕ ತೋರಿದರು. ಪುಷ್ಪಕುಮಾರಿ ವೆಂಕಟೇಶ್ ಕ್ಯಾಮೆರಾ ಚಾಲನೆ ಕೊಟ್ಟರು.
ಶಿವರಾಜ್ ಕುಮಾರ್ ಮಾತನಾಡಿ, "ರಾಕ್‌ಲೈನ್ ವೆಂಕಟೇಶ್ ಅವರ ಸಂಸ್ಥೆ ಅಂದರೆ ನನಗೆ ನಮ್ಮ ಮನೆಯ ಸಂಸ್ಥೆ ಇದ್ದ ಹಾಗೆ. ನನ್ನ ಅವರ ಸ್ನೇಹ ಮೂವತ್ತು ವರ್ಷಕ್ಕೂ ಹಳೆಯದು. ಸ್ನೇಹಿತರಾಗಿ ಬಂದು ನಿರ್ಮಾಪಕರಾದರು. ಇಂತಹ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ಹಾಗೂ ಯೋಗರಾಜ್ ಭಟ್ ನಿರ್ದೇಶನದಲ್ಲಿ ಅಭಿನಯಿಸುತ್ತಿರುವುದು ಸಂತಸ ತಂದಿದೆ" ಎಂದರು.