ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ 'ಸಲಾರ್' ಇದೇ ಡಿಸೆಂಬರ್ 22ರಂದು ತೆರೆ ಕಾಣಲಿದೆ. ಭಾರತೀಯ ಚಿತ್ರರಂಗದ ಬ್ಲಾಕ್ಬಸ್ಟರ್ ಸಿನಿಮಾ 'ಕೆಜಿಎಫ್' ಚಿತ್ರತಂಡವೇ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ. ಈ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಪ್ರಮಾಣಪತ್ರವನ್ನೂ ನೀಡಿದೆ. ಇದೀಗ ಚಿತ್ರತಂಡ 'ಸಲಾರ್' ಬಗ್ಗೆ ಹೊಸ ಅಪ್ಡೇಟ್ ನೀಡಿದೆ.
'ಸಲಾರ್' ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಟ್ರೇಲರ್ ಮತ್ತು ಪೋಸ್ಟರ್ ಬಿಟ್ಟರೆ ಚಿತ್ರತಂಡ ಈವರೆಗೆ ಮತ್ಯಾವುದೇ ಹೊಸ ವಿಚಾರವನ್ನು ಹಂಚಿಕೊಂಡಿಲ್ಲ. ಅಲ್ಲದೇ ಶೀಘ್ರದಲ್ಲೇ ತೆರೆ ಕಾಣಲಿರುವ ಚಿತ್ರದ ಪ್ರಮೋಷನ್ ಕೂಡ ಚಿತ್ರತಂಡ ಮಾಡುತ್ತಿಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ಬಹಳ ಬೇಸರವಿತ್ತು. ಆದರೆ, ಇದೀಗ ಚಿತ್ರತಂಡ ಸಿನಿಮಾದ ಮೊದಲ ಹಾಡನ್ನು ಅನಾವರಣಗೊಳಿಸಲು ತಯಾರಿ ಮಾಡಿಕೊಂಡಿದೆ. ಅತ್ಯಂತ ಶೀಘ್ರದಲ್ಲೇ ಸಾಂಗ್ ರಿಲೀಸ್ ಆಗಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಹೊಂಬಾಳೆ ಫಿಲ್ಮ್ಸ್ ಇಂದೇ 'ಸಲಾರ್: ಪಾರ್ಟ್ 1' ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಬಹುದು. ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಟ್ವೀಟ್ ಮಾಡಿದ್ದು, "ನಮ್ಮ ಹೊಂಬಾಳೆ ಮ್ಯೂಸಿಕ್ ಮೂಲಕ ಸಲಾರ್ ಸಂಗೀತವನ್ನು ನಿಮ್ಮಲ್ಲಿಗೆ ತರಲು ಉತ್ಸುಕರಾಗಿದ್ದೇವೆ. ಮಹಾಕಾವ್ಯ ಸಂಗೀತ ಪ್ರಯಾಣಕ್ಕೆ ಸಿದ್ಧರಾಗಿ. ರವಿ ಬಸ್ರೂರ್ ಸಂಗೀತ ಸಂಯೋಜಿಸಿರುವ 'ಸಲಾರ್' ಫಸ್ಟ್ ಸಿಂಗಲ್ ಇಂದೇ ಘೋಷಣೆ" ಎಂದು ಬರೆದುಕೊಂಡಿದೆ.