ರೆಬಲ್ ಸ್ಟಾರ್ ಪ್ರಭಾಸ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ. ಭಾರತದ ಬಹುನಿರೀಕ್ಷಿತ ಸಿನಿಮಾ 'ಸಲಾರ್' ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕಾಂಬಿನೇಶನ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.
ಇಂದು ದಕ್ಷಿಣ ಚಿತ್ರತರಂಗದ ಖ್ಯಾತ ಚಲನಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಬಿಡುಗಡೆ ದಿನಾಂಕವನ್ನು ಚಿತ್ರ ತಯಾರಕರು ಘೋಷಿಸಿದ್ದಾರೆ. ಡಿಸೆಂಬರ್ 22 ರಂದು ಸಲಾರ್ ಸಿನಿಮಾ ತೆರೆಗಪ್ಪಳಿಸಲಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅಭಿನಯದ ಡಂಕಿ ಕೂಡ ಡಿಸೆಂಬರ್ 22ರಂದೇ ಬಿಡುಗಡೆ ಆಗಲಿದೆ. ಕ್ರಿಸ್ಮಸ್ ವೇಳೆ ಬಾಕ್ಸ್ ಆಫೀಸ್ನಲ್ಲಿ ಶಾರುಖ್ ವರ್ಸಸ್ ಪ್ರಭಾಸ್ ಸಿನಿಮಾ ಮಧ್ಯೆ ಪೈಪೋಟಿ ನಡೆಯುವುದು ಪಕ್ಕಾ ಆಗಿದೆ.
ಇಂದು ಸಲಾರ್ ( Salaar: Part 1 Ceasefire) ಚಿತ್ರ ತಯಾರಕರಾದ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಪ್ರಭಾಸ್ ಪೋಸ್ಟರ್ ಶೇರ್ ಮಾಡಿರುವ ಹೊಂಬಾಳೆ ಫಿಲ್ಮ್ಸ್, ''ಕಮಿಂಗ್ ಸೂನ್, ಸಲಾರ್ ಭಾಗ 1 ವಿಶ್ವಾದ್ಯಂತ ಡಿಸೆಂಬರ್ 22ರಂದು ತೆರೆಕಾಣಲಿದೆ'' ಎಂದು ಬರೆದುಕೊಂಡಿದೆ.
ಬಿಡುಗಡೆ ದಿನಾಂಕ ಘೋಷಿಸಿದ ಸಲಾರ್ ತಂಡ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಲೇಟೆಸ್ಟ್ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದೆ. 44ರ ಹರೆಯದ ಸೂಪರ್ ಸ್ಟಾರ್ ಪ್ರಭಾಸ್ ಮುಖದ ಮೇಲೆ ಗಂಭೀರ ನೋಟವಿದ್ದು, ದೇಹ ರಕ್ತಸಿಕ್ತವಾಗಿದೆ. ನಟನ ರಗಡ್ ಲುಕ್ನಿಂದಾಗಿ ಇದೊಂದು ಕಂಪ್ಲೀಟ್ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಅನ್ನೋದನ್ನು ಮತ್ತೊಮ್ಮೆ ಖಚಿತಪಡಿಸಿದೆ.
ಇದನ್ನೂ ಓದಿ:ಜನ್ಮದಿನದ ಸಂಭ್ರಮದಲ್ಲಿ ರೂಪವತಿ ಮೌನಿ ರಾಯ್: ಕೆಜಿಎಫ್ ಚೆಲುವೆಯ ಹಳೇ ಫೋಟೋ ನೋಡಿದ್ದೀರಾ?!
ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಈ ಬಹುನಿರೀಕ್ಷಿತ ಚಿತ್ರ ರೆಡಿಯಾಗುತ್ತಿದೆ. ಕೆಜಿಎಫ್ ಖ್ಯಾತಿ ಮತ್ತು ಪ್ರಶಾಂತ್ ನೀಲ್ ಬಗ್ಗೆ ಈಗಾಗಲೇ ಅಭಿಮಾನಿಗಳಿಗೆ ಹೆಚ್ಚಾಗಿ ಹೇಳಬೇಕಿಲ್ಲ. ಹೊಂಬಾಳೆ ಫಿಲ್ಮ್ಸ್, ಪ್ರಶಾಂತ್ ನೀಲ್, ಪ್ರಭಾಸ್ ಕಾಂಬೋದಲ್ಲಿ ಸಿನಿಮಾ ಬರುತ್ತಿರುವುದರಿಂದ ಪ್ರೇಕ್ಷಕರ ಕುತೂಹಲ ಶಿಖರದಷ್ಟಿದೆ. ಪ್ರಭಾಸ್ ಕೊನೆಯ ಚಿತ್ರ ಆದಿಪುರುಷ್ ಹಿನ್ನೆಡೆ ಕಂಡಿದ್ದು, ಮುಂದಿನ ಸಿನಿಮಾ ಗೆಲ್ಲಲಿದೆ ಅನ್ನೋದು ಅಭಿಮಾನಿಗಳ ಗಟ್ಟಿ ವಿಶ್ವಾಸ. ಈ ಚಿತ್ರವು ಪ್ರಭಾಸ್ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ದೃಢ ವಿಶ್ವಾಸವಿದೆ. ಆದಾಗ್ಯೂ ಈ ವರ್ಷದ ಕೊನೆಯಲ್ಲಿ ಎಸ್ಆರ್ಕೆ ಅಭಿನಯದ ಡಂಕಿ ಸಿನಿಮಾ ಕೂಡ ಬಿಡುಗಡೆ ಆಗೋ ಹಿನ್ನೆಲೆ, ಸಲಾರ್ ಎದುರಿಸಬಹುದಾದ ಸಂಭಾವ್ಯ ಸ್ಪರ್ಧೆಯನ್ನು ಅಲ್ಲಗೆಳೆಯುವಂತಿಲ್ಲ. ಎಸ್ಆರ್ಕೆ ಅವರ ಕೊನೆಯ ಎರಡು ಚಿತ್ರಗಳಾದ ಪಠಾಣ್ ಮತ್ತು ಜವಾನ್ ಎರಡೂ ಕೂಡ ಸಾವಿರ ಕೋಟಿ ರೂ. ಕ್ಲಬ್ ಸೇರಿದ್ದು, ಮುಂದಿನ ಸಿನಿಮಾ ಕೂಡ ಸಲಾರ್ಗೆ ಸಖತ್ ಫೈಟ್ ಕೊಡಲಿದೆ.
ಇದನ್ನೂ ಓದಿ:'ಕಾವೇರಿ'ದ ಬಂದ್: ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ