ನಟ ಪ್ರಭಾಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬೋದ 'ಸಲಾರ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯುತ್ತಿದೆ. ಡಿಸೆಂಬರ್ 22ರಂದು ತೆರೆ ಕಂಡ ಚಿತ್ರ ಉತ್ತಮ ಕಲೆಕ್ಷನ್ನೊಂದಿಗೆ ಪ್ರದರ್ಶನ ಮುಂದುವರೆಸಿದೆ. ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ 2023ರ ಭಾರತೀಯ ಸಿನಿಮಾ ಇದಾಗಿದೆ. ಈಗ ಎರಡನೇ ದಿನಕ್ಕಿಂತ ಮೂರನೇ ದಿನ ಹೆಚ್ಚು ಕಲೆಕ್ಷನ್ ಮಾಡಿದೆ. ಮೂರು ದಿನಗಳಲ್ಲಿ ವಿಶ್ವದಾದ್ಯಂತ 400 ಕೋಟಿ ರೂಪಾಯಿ ಗಳಿಸಿದೆ.
3 ದಿನ ₹400 ಕೋಟಿ: ವಿಶ್ವದಾದ್ಯಂತ ಮೊದಲ ದಿನ ರೂ.176 ಕೋಟಿ ಹಾಗೂ ಎರಡನೇ ದಿನ ರೂ.119 ಕೋಟಿ ಮೂರನೇ ದಿನ 107 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಮೂರು ದಿನದಲ್ಲಿ 402 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರತಂಡ ಹೇಳಿದೆ. ಇನ್ನೊಂದು ದಿನದಲ್ಲಿ ಈ ಸಿನಿಮಾ ರೂ.500 ಕೋಟಿ ಕ್ಲಬ್ ತಲುಪುವ ನಿರೀಕ್ಷೆ ಇದೆ. ಇಂದು ಕ್ರಿಸ್‌ಮಸ್ ರಜೆ ಹಾಗೂ ಮಂಗಳವಾರ ಅರ್ಧ ದಿನ ಇರುವುದರಿಂದ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು.
ಭಾರತದಲ್ಲಿ ₹200 ಕೋಟಿ ಗಳಿಕೆ: ತೆರೆಗೆ ಬಂದ ಮೂರೇ ದಿನಗಳಲ್ಲಿ 'ಸಲಾರ್' ದೇಶಾದ್ಯಂತ 200 ಕೋಟಿ ರೂ.ಗೂ ಹೆಚ್ಚು ಹಣ ಗಳಿಸಿದೆ. ವಿಶೇಷವಾಗಿ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಈ ಚಿತ್ರಕ್ಕೆ ಪ್ರೇಕ್ಷಕರು ಕುಣಿದು ಕುಪ್ಪಳಿಸುತ್ತಿದ್ದಾರೆ. ಟ್ರೇಡ್ ಪಂಡಿತರು ಹೇಳುವಂತೆ ಈ ಸಿನಿಮಾ ತೆಲಂಗಾಣದಲ್ಲಿ ಮೂರು ದಿನದಲ್ಲಿ 44.80 ಕೋಟಿ ರೂಪಾಯಿ ಸಂಗ್ರಹಿಸಿದೆ. ಆಂಧ್ರದಲ್ಲೂ ಭರ್ಜರಿ ಕಲೆಕ್ಷನ್ ಬರುತ್ತಿದೆಯಂತೆ.
ಪ್ರಶಾಂತ್ ನೀಲ್ ಅವರ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆತ್ಮೀಯ ಸ್ನೇಹಿತರು ಹೇಗೆ ಕಡು ಶತ್ರುಗಳಾಗಿ ಬದಲಾದರು ಎಂಬುದರ ಸುತ್ತ ಈ ಸಿನಿಮಾ ಸುತ್ತುತ್ತದೆ. ಶ್ರುತಿ ಹಾಸನ್, ಈಶ್ವರಿ ರಾವ್, ಜಗಪತಿ ಬಾಬು, ಶ್ರೀಯಾ ರೆಡ್ಡಿ, ಬಾಬಿ ಸಿಂಹ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರ ನಿರ್ಮಿಸಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಶುಕ್ರವಾರ ಬಿಡುಗಡೆಯಾದ ಚಿತ್ರವು ಶಾರುಖ್ ಖಾನ್ ಅವರ 'ಡಂಕಿ'ಗೆ ಭರ್ಜರಿ ಪೈಪೋಟಿ ನೀಡುತ್ತಿದೆ.
ಇದನ್ನೂ ಓದಿ:ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ನ ಸುರಿಮಳೆ: ಮೂರು ದಿನದಲ್ಲಿ ದೇಶ್ಯಾದ್ಯಂತ 200 ಕೋಟಿಗೂ ಅಧಿಕ ಗಳಿಸಿದ ಸಲಾರ್