2023ರ ಕೊನೆಯಲ್ಲಿ ಬಿಡುಗಡೆಗೆ ಸಜ್ಜಾಗಿರುವ ಬಹುನಿರಿಕ್ಷಿತ ಸಿನಿಮಾ 'ಸಲಾರ್'. ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಬಿಗ್ ಪ್ರಾಜೆಕ್ಟ್. ಚಿತ್ರತಂಡ ಸಿನಿಪ್ರಿಯರ ಕುತೂಹಲ, ನಿರೀಕ್ಷೆ ಹೆಚ್ಚಿಸುವ ಕೆಲಸ ಮುಂದುವರಿಸಿದೆ. ಅದರ ಭಾಗವಾಗಿ ಇಂದು 'ಸಲಾರ್' ತಂಡ ಚಿತ್ರದಿಂದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಹೊಸ ಪೋಸ್ಟರ್ ಅನಾವರಣಗೊಳಿಸಿದೆ. ಜೊತೆಗೆ ಟ್ರೇಲರ್ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಂಡಿದೆ.
ಅಧಿಕೃತ ಮಾಹಿತಿ ಕೊಟ್ಟ ಹೊಂಬಾಳೆ ಫಿಲ್ಮ್ಸ್: ಈಗಾಗಲೇ ಚಿತ್ರದ ಮೊದಲ ಟೀಸರ್ ಅನಾವರಣಗೊಂಡಿದೆ. ಅಭಿಮಾನಿಗಳಿಗೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಆ್ಯಕ್ಷನ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಟ್ರೇಲರ್ಗಾಗಿ ಸಿನಿಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ವಿಮರ್ಶಕ, ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಡಿಸೆಂಬರ್ 1ರಂದು ಟ್ರೇಲರ್ ಅನಾವರಣಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಸಲಾರ್ ಹಿಂದಿರುವ ಹೊಂಬಾಳೆ ಫಿಲ್ಮ್ಸ್ ನಿಂದ ಅಧಿಕೃತ ಘೋಷಣೆಗೆ ಸಿನಿಪ್ರಿಯರು ಕಾದಿದ್ದರು. ಅಂತಿಮವಾಗಿ ಇಂದು ಅಧಿಕೃತ ಮಾಹಿತಿ ಹೊರಬಿದ್ದಿದೆ.
ಅಭಿಮಾನಿಗಳಿಗೆ ದೀಪಾವಳಿ ಉಡುಗೊರೆ:ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ಟ್ರೇಲರ್ ಡಿಸೆಂಬರ್ 1ರ ಸಂಜೆ 7:19ಕ್ಕೆ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಸಲಾರ್ ಮಾಹಿತಿ, ಆಸಕ್ತಿಕರ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಹೊಂಬಾಳೆ ಫಿಲ್ಮ್ಸ್ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿದೆ.