ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್ನ 2023ರ ಬಹುನಿರೀಕ್ಷಿತ ಸಿನಿಮಾ 'ಸಲಾರ್' ಡಿಸೆಂಬರ್ 22ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಆವೃತ್ತಿಯಲ್ಲಿ ಚಿತ್ರಮಂದಿರ ಪ್ರವೇಶಿಸಿತು. ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸಿದೆ. ತೆರೆಕಂಡ 9 ದಿನಗಳಲ್ಲಿ ಅದ್ಭುತ ಕಲೆಕ್ಷನ್ ಮೂಲಕ ಅನೇಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಶನಿವಾರದ ಹೊತ್ತಿಗೆ ಸಲಾರ್ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 329.62 ಕೋಟಿ ರೂಪಾಯಿ ಸಂಗ್ರಹಿಸಿದೆ.
ನಿರೀಕ್ಷೆಯಂತೆ ಸಲಾರ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಸ್ಯಾಕ್ನಿಲ್ಕ್ ಮಾಹಿತಿಯಂತೆ, ಒಂಭತ್ತನೇ ದಿನ ಅಂದರೆ ಶನಿವಾರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 12.50 ಕೋಟಿ ರೂ. ಗಳಿಸಿದೆ. ಶನಿವಾರ ತೆಲುಗಿನಲ್ಲಿ ಶೇ. 38.01 ಮತ್ತು ಹಿಂದಿಯಲ್ಲಿ ಶೇ. 22.84ದಷ್ಟು ಆಕ್ಯುಪೆನ್ಸಿ ದರ ಹೊಂದಿತ್ತು. ಇಂದು ಭಾನುವಾರ ಮತ್ತು ಜನರು ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದು, ಕಲೆಕ್ಷನ್ ಅಂಕಿಅಂಶ ಅತ್ಯುತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ.
ಜಾಗತಿಕ ಗಳಿಕೆಯ ವಿವರ: ಉತ್ತರ ಅಮೆರಿಕದಲ್ಲಿ 8 ಮಿಲಿಯನ್ ಡಾಲರ್‌ಗೂ ಹೆಚ್ಚು ಗಳಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಉತ್ತರ ಅಮೆರಿಕದಲ್ಲಿ 8 ಮಿಲಿಯನ್ ಡಾಲರ್‌ಗೂ ಹೆಚ್ಚು ಕಲೆಕ್ಷನ್ ಮಾಡಿರುವ ದಕ್ಷಿಣದ ಏಕೈಕ ನಟ ಪ್ರಭಾಸ್. ಅಲ್ಲದೇ ಜಗತ್ತಿನೆಲ್ಲೆಡೆ 500 ಕೋಟಿ ರೂ. ದಾಟಿದ ಮೂರು ಸಿನಿಮಾಗಳನ್ನು ಹೊಂದಿರುವ ಏಕೈಕ ನಟನೂ ಹೌದು. ಇವರ ಈ ಮೊದಲಿನ ಬಾಹುಬಲಿ 1 ಮತ್ತು 2 ಕೂಡ 500 ಕೋಟಿ ರೂ.ನ ಗಡಿ ದಾಟಿದೆ.