ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರು ತಮ್ಮ ಹೊಸ ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದಾರೆ. ಬಾಹುಬಲಿ ಯಶಸ್ಸಿನ ನಂತರ ಪ್ಯಾನ್ ಇಂಡಿಯಾ ಸ್ಟಾರ್‌ಡಮ್‌ಗೆ ಹೆಸರುವಾಸಿಯಾದ ಪ್ರಭಾಸ್ ಮತ್ತು ಬ್ಲಾಕ್‌ಬಸ್ಟರ್ ಕೆಜಿಎಫ್ ಸರಣಿ ಸಿನಿಮಾಗಳ ನಿರ್ದೇಶನ ಶೈಲಿಗೆ ಜನಪ್ರಿಯತೆ ಸಂಪಾದಿಸಿದ ಪ್ರಶಾಂತ್ ನೀಲ್ ಸಲಾರ್ ಸಿನಿಮಾಗೆ ಕೈಜೋಡಿಸಿದಾಗಿನಿಂದಲೂ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ವ್ಯಕ್ತವಾಗುತ್ತಿದೆ. ಆದಾಗ್ಯೂ, ಈ ಕಾಂಬಿನೇಶನ್ ಮೊದಲ ಹಂತದಲ್ಲೇ ಫೈನಲ್ ಆಗಿಲ್ಲ ಎಂಬುದನ್ನು ಪ್ರಭಾಸ್ ಇತ್ತೀಚೆಗೆ ಬಹಿರಂಗಪಡಿಸಿದ್ದರು.
ಸಲಾರ್ ಹಿಂದಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ವಿಶೇಷ ಸಂದರ್ಶನದ ವಿಡಿಯೋವನ್ನು ಅನಾವರಣಗೊಳಿಸಿದೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಪ್ರಶಾಂತ್ ನೀಲ್ ಅವರನ್ನು ಜನಪ್ರಿಯ ನಿರ್ದೇಶಕ ಎಸ್ಎಸ್ ರಾಜಮೌಳಿ ಸಂದರ್ಶನ ನಡೆಸಿದ್ದಾರೆ. ಈ ಚರ್ಚೆಯಲ್ಲಿ ರಾಜಮೌಳಿ ಅವರು ಪ್ರಶಾಂತ್ ಅವರಂತಹ ಜನಪ್ರಿಯ, ಪ್ರಮುಖ ನಿರ್ದೇಶಕರಿಂದ ಸಿನಿಮಾ ಆಯ್ಕೆಯಾದ ಅನುಭವದ ಬಗ್ಗೆ ಪ್ರಭಾಸ್ ಅವರಲ್ಲಿ ಪ್ರಶ್ನಿಸಿದರು.
ಅಂದು ಪ್ರಶಾಂತ್ ಹಾಟ್ ಪ್ರಾಪರ್ಟಿ ಆಗಿದ್ದರೆಂದು ತಿಳಿಸಿದ ಪ್ರಭಾಸ್, ಅವರು ಹೋದಲ್ಲೆಲ್ಲಾ ಕೆಜಿಎಫ್ ಬಗ್ಗೆ ಪ್ರಶಂಸೆಯ ಮಾತುಗಳನ್ನೇ ಕೇಳಿದರು. ಅವರ ಸಿನಿಮಾ ವೀಕ್ಷಿಸಿದ ಬಳಿಕ ಪ್ರಶಾಂತ್ ಅವರ ಕೆಲಸದ ಹಿಂದಿನ ಆಕರ್ಷಣೆ ನನ್ನ ಗಮನಕ್ಕೆ ಬಂತು ಎಂದು ತಿಳಿಸಿದರು. ತಮ್ಮನ್ನು ಭೇಟಿಯಾಗಲು ಆಸಕ್ತಿ ವ್ಯಕ್ತಪಡಿಸಿದ್ದ ಪ್ರಶಾಂತ್ ಅವರಿಂದ ಕರೆ ಸ್ವೀಕರಿಸಿದ ಕ್ಷಣವನ್ನು ಪ್ರಭಾಸ್ ಬಹಿರಂಗಪಡಿಸಿದರು. ಭೇಟಿಯಾದ ಸಂದರ್ಭವೂ ಆರಂಭದಲ್ಲಿ ಕೊಲಾಬರೇಶನ್ ವಿಷಯವನ್ನು ಪ್ರಸ್ತಾಪಿಸಲಿಲ್ಲ ಎಂಬುದಾಗಿ ಪ್ರಭಾಸ್ ತಿಳಿಸಿದರು.
ಪ್ರಶಾಂತ್ ನೀಲ್ ತಮ್ಮ ನಟರನ್ನು ಆರಾಧಿಸುವ ಸೌಮ್ಯ ಆತ್ಮ ಎಂದು ಪ್ರಭಾಸ್ ಬಣ್ಣಿಸಿದ್ದಾರೆ. ಸಿನಿಮಾಗೆ ಒಪ್ಪಿಗೆ ನೀಡುವ ಮೊದಲು ವೈಯಕ್ತಿಕವಾಗಿ ಉತ್ತಮ ಬಾಂಧವ್ಯವನ್ನು ಹೊಂದುವುದು ಅವರಿಗೆ ಪ್ರಮುಖ ವಿಷಯ. ಮೊದಲ ಭೇಟಿ ನಂತರ, ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಚರ್ಚಿಸಲಿಲ್ಲ, ಆದರೆ ನಿರ್ಮಾಪಕರು ನಮಗೆ ಸಹಾಯ ಮಾಡಿದರು. ನಾವು ಪರಸ್ಪರ ಮೆಚ್ಚಿಕೊಂಡೆವು. ಆದರೆ ಮೊದಲ ಭೇಟಿಯ ನಂತರ ಕರೆ ಮಾಡಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ಪ್ರಮೋದ್ (ಪ್ರಭಾಸ್ ಅವರ ಸೋದರಸಂಬಂಧಿ) ಕಾಲ್ ಒಂದನ್ನು ಸ್ವೀಕರಿಸಿದರು. ಪ್ರಶಾಂತ್ ನನ್ನೊಂದಿಗೆ ಸಿನಿಮಾ ಮಾಡಲಿಚ್ಚಿಸುತ್ತಿರುವುದು ಗೊತ್ತಾಯಿತು.