ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲು ಸಜ್ಜಾಗಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ಸಲಾರ್'. ಕೆಜಿಎಫ್ ಖ್ಯಾತಿಯ ನಿರ್ಮಾಪಕರು, ನಿರ್ದೇಶಕರು ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕಾಂಬಿನೇಶನ್ನ ಪ್ರಾಜೆಕ್ಟ್ ಆದ ಹಿನ್ನೆಲೆ, ಸಿನಿಮಾ ಮೇಲೆ ಸಿನಿಪ್ರಿಯರ ನಿರೀಕ್ಷೆ ಶಿಖರದಷ್ಟಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ಮಾಸ್ ಪೋಸ್ಟರ್‌ಗಳಿಗೆ ಮನಸೋತಿರುವ ಅಭಿಮಾನಿಗಳು ಟ್ರೇಲರ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಬಹುನಿರೀಕ್ಷಿತ ಆ್ಯಕ್ಷನ್ - ಪ್ಯಾಕ್ಡ್ ಟ್ರೇಲರ್ ನಾಳೆ ಸಂಜೆ 7:19ಕ್ಕೆ ಅನಾವರಣಗೊಳ್ಳಲಿದೆ.
ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆಗೂ ಮುನ್ನ ಹೊಂಬಾಳೆ ಫಿಲ್ಮ್ಸ್ ಆ್ಯಕ್ಷನ್ - ಪ್ಯಾಕ್ಡ್ ಚಿತ್ರದ ತೆರೆಮರೆಯ ಫೋಟೋ ಹಂಚಿಕೊಂಡಿದೆ. ಇದು ಸಲಾರ್ ಸೆಟ್ ಫೋಟೋ ಆಗಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಾಯಕ ನಟ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಈ ಥ್ರಿಲ್ಲಿಂಗ್ ಆ್ಯಕ್ಷನ್ ಎಂಟರ್‌ಟೈನ್ಮೆಂಟ್ ಸಿನಿಮಾದ ಟ್ರೇಲರ್ ನಾಳೆ ಬಿಡುಗಡೆ ಆಗಲಿದ್ದು, ಒಂದು ಹಂತದ ಕಾಯುವಿಕೆ ಪೂರ್ಣಗೊಳ್ಳಲಿದೆ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್ ಕಾಂಬಿನೇಶನ್ನ ಫೈನಲ್ ಔಟ್ಪುಟ್ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.
ನಟ ನಿರ್ದೇಶಕರ ಫೋಟೋ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್ ಈ ಫೋಟೋಗೆ ಕ್ಯಾಪ್ಷನ್ ಕೊಡಿ, ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಮೊದಲ ದಿನದ ಶೋಗಳ ಟಿಕೆಟ್ ಪಡೆಯಿರಿ ಎಂದು ಬರೆದುಕೊಂಡಿದೆ. ಅತ್ಯುತ್ತಮ ಕ್ಯಾಪ್ಷನ್ ನೀಡುವ 5 ಮಂದಿಗೆ ಸಿನಿಮಾ ತೆರೆಕಂಡ ಮೊದಲ ದಿನದ ಟಿಕೆಟ್ಗಳು ಉಚಿತವಾಗಿ ಲಭ್ಯವಾಗಲಿದೆ. ಈ ಹಿನ್ನೆಲೆ, ಅಭಿಮಾನಿಗಳು ಈ ಪೋಸ್ಟ್ನ ಕಾಮೆಂಟ್ ಬಾಕ್ಸ್ನಲ್ಲಿ ಕ್ಯಾಪ್ಷನ್ ಕೊಡುತ್ತಿದ್ದಾರೆ.