ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ವಿವಾಹದ ನಂತರ ಅಭಿಮಾನಿಗಳೀಗ 'ಆದಿಪುರುಷ್' ಸಿನಿಮಾ ತಾರೆಯರಿಂದ ಶುಭ ಸುದ್ದಿಗೆ ಕಾಯುತ್ತಿದ್ದಾರೆ. ಬಾಲಿವುಡ್ ಬೆಡಿಕೆ ನಟಿ ಕೃತಿ ಸನೊನ್ ಮತ್ತು ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಅವರ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು, ಅಂದರೆ ಹಸೆಮಣೆ ಏರಲು ಸಿದ್ಧರಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಜೋಡಿ ತಮ್ಮ ನಿಶ್ಚಿತಾರ್ಥಕ್ಕಾಗಿ ಮಾಲ್ಡೀವ್ಸ್‌ಗೆ ಹಾರಲಿದ್ದಾರೆ ಎಂಬ ಗುಸುಗುಸು ಶುರುವಾಗಿದೆ.
ಪ್ರಭಾಸ್ - ಕೃತಿ ಸನೊನ್ ನಿಶ್ಚಿತಾರ್ಥ: ವರದಿಗಳ ಪ್ರಕಾರ, ವದಂತಿಗಳ ಲವ್ ಬರ್ಡ್ಸ್ ಮುಂದಿನ ವಾರದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ವಿಷಯವನ್ನು ಸ್ವಯಂ ಘೋಷಿತ ವಿಮರ್ಶಕ ಉಮೈರ್ ಸಂಧು (Umair Sandhu) ಬಹಿರಂಗಪಡಿಸಿದ ನಂತರ ಪ್ರಭಾಸ್ ಮತ್ತು ಕೃತಿ ಅವರ ನಿಶ್ಚಿತಾರ್ಥದ ವದಂತಿ ಜೋರಾಗಿ ಹರಡತೊಡಗಿದೆ. ಮಾಲ್ಡೀವ್ಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಉಮೈರ್ ಸಂಧು ತಿಳಿಸಿದ್ದಾರೆ.
ಉಮೈರ್ ಸಂಧು ಟ್ವೀಟ್:ನಟ ಪ್ರಭಾಸ್ ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಯ ಮದುವೆಯನ್ನು ನೋಡಲು ಕಾತರದಿಂದ ಕಾಯುತ್ತಿರುವ ಈ ಸಂದರ್ಭ ಉಮೈರ್ ಅವರ ಟ್ವೀಟ್ ವೈರಲ್ ಆಗಿದೆ. ಕೃತಿ ಸನೊನ್ ಮತ್ತು ಪ್ರಭಾಸ್ ಜೋಡಿಯನ್ನು ಪ್ರೀತಿಯಿಂದ ಪ್ರಕೃತಿ (PraKriti) ಎಂದು ಕರೆಯುವ ಅಭಿಮಾನಿಗಳು ನಿಶ್ಚಿತಾರ್ಥದ ಅಧಿಕೃತ ಘೋಷಣೆಗೆ ಕಾಯುತ್ತಿದ್ದಾರೆ.
ಪ್ರಭಾಸ್ ಆಪ್ತರ ಮಾಹಿತಿ:ಆದರೆ ಪ್ರಭಾಸ್ ಆಪ್ತರ ಪ್ರಕಾರ, ಉಮೈರ್ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಪ್ರಭಾಸ್ ಮತ್ತು ಕೃತಿ ನಿಶ್ಚಿತಾರ್ಥದ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ. ಆ ಜೋಡಿಯದ್ದು ಸ್ನೇಹ, ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಪ್ರಭಾಸ್ ತಂಡ ಹೇಳಿದೆ.