ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ ಪ್ರಭಾಸ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. 'ಬಾಹುಬಲಿ' ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಹೀರೋ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಚಿತ್ರಗಳ ಬಗ್ಗೆ ಆಗಾಗ ಅಪ್ಡೇಟ್ ನೀಡುವ ನಟ ಫ್ಯಾನ್ಸ್ ಜೊತೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ. ಇದೀಗ ತಮ್ಮ ಅಭಿಮಾನಿಯಿಂದ ಪ್ರೀತಿಯ ಕಪಾಳಮೋಕ್ಷ ಸ್ವೀಕರಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
2019ರಲ್ಲಿ ತೆಗೆಯಲಾದ ವಿಡಿಯೋ ಇದೀಗ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಈ ದೃಶ್ಯದಲ್ಲಿ, ವಿಮಾನ ನಿಲ್ದಾಣದಲ್ಲಿ ಪ್ರಭಾಸ್ ಅವರನ್ನು ಕಂಡ ಸಂತೋಷದಲ್ಲಿ ಅಭಿಮಾನಿ ಹುಡುಗಿಯೊಬ್ಬಳು ಅವರ ಬಳಿಗೆ ತೆರಳಿ ಸೆಲ್ಫಿ ತೆಗೆದುಕೊಳ್ಳುತ್ತಾಳೆ. ತನ್ನ ನೆಚ್ಚಿನ ನಟನನ್ನು ಕಂಡು ಖುಷಿ ತಡೆಯಲಾಗದೇ ಪ್ರಭಾಸ್ ಕೆನ್ನೆಗೆ 'ಅಭಿಮಾನ'ದ ಕಪಾಳಮೋಕ್ಷ ಮಾಡುತ್ತಾಳೆ. ನಗುತ್ತಾ ಆಕೆ ಅಲ್ಲಿಂದ ತೆರಳುತ್ತಾಳೆ. ಒಂದು ಸೆಕೆಂಡ್ ಆ ಹುಡುಗಿಯ ನಡೆ ಪ್ರಭಾಸ್ ಅವರನ್ನು ಗೊಂದಲಕ್ಕೆ ದೂಡುವಂತೆ ಮಾಡಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಇಂತಹದ್ದೇ ಕೆಲವು ಕಾರಣಗಳಿಗಾಗಿ ಸೆಲೆಬ್ರಿಟಿಗಳು ಎಲ್ಲಿಗೇ ಹೋದರೂ ಅಂಗರಕ್ಷಕರನ್ನು ಜೊತೆಯಾಗಿ ಕರೆದುಕೊಂಡು ಹೋಗುತ್ತಾರೆ. ಕೆಲವೊಮ್ಮೆ ಅಭಿಮಾನ ತೀವ್ರ ರೂಪ ಪಡೆಯುವುದೂ ಉಂಟು. ಕೆಲ ಅಭಿಮಾನಿಗಳು ತಾವು ಮೆಚ್ಚುವ ಸೆಲೆಬ್ರಿಟಿಗಳಿಗೆ ಹತ್ತಿರವಾಗಲು ಪ್ರಯತ್ನಿಸುವ ವೇಳೆ ಮಿತಿ ಮೀರಿ ವರ್ತಿಸುವುದುಂಟು. ಆದರೆ ಈ ವಿಡಿಯೋ ನಟನ ಮೇಲಿರುವ ಆಕೆಯ ಅಗಾಧ ಪ್ರೀತಿಯನ್ನು ತೋರಿಸಿದೆ. ಆದರೆ ಪ್ರಭಾಸ್ ಆಕೆಯ ವರ್ತನೆಗೆ ಗಾಬರಿಯಾದಂತೆ ಕಾಣುತ್ತಿದ್ದಾರೆ. ಒಟ್ಟಿನಲ್ಲಿ ತಮ್ಮ ಪ್ರೀತಿ, ಅಭಿಮಾನ ವ್ಯಕ್ತಪಡಿಸುವ ಭರದಲ್ಲಿ ಸೆಲೆಬ್ರಿಟಿಗಳ ಖಾಸಗಿತನಕ್ಕೆ ಅಡ್ಡಿಯಾಗಬಾರದು ಎಂಬುದನ್ನು ಫ್ಯಾನ್ಸ್ ನೆನಪಿಟ್ಟುಕೊಳ್ಳುವುದು ಅತ್ಯಗತ್ಯ.