ಮುಂಬೈ:ಟಾಲಿವುಡ್ನಪ್ಯಾನ್ ಇಂಡಿಯಾ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಪ್ರಭಾಸ್ 'ಸಲಾರ್' ಚಿತ್ರದ ಮೂಲಕ ಮತ್ತೆ ಯಶಸ್ಸಿನ ಹಾದಿಗೆ ಮರಳಿದ್ದಾರೆ. ಇದೀಗ ಮಕರ ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಭಾಸ್ ಅವರ ಮುಂದಿನ ಚಿತ್ರವನ್ನು ಘೋಷಿಸಲಾಗಿದೆ. ಹಬ್ಬದಂದು ಅಭಿಮಾನಿಗಳನ್ನು ಖುಷಿಪಡಿಸಿರುವ ನಿರ್ಮಾಪಕರು ಚಿತ್ರದ ಟೈಟಲ್ ಜೊತೆ ಫಸ್ಟ್ಲುಕ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ.
ಮಾರುತಿ ದಾಸರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ 'ದಿ ರಾಜಾ ಸಾಬ್' ಎಂದು ಹೆಸರಿಡಲಾಗಿದೆ. ಇದೊಂದು ರೋಮ್ಯಾಂಟಿಕ್, ಹಾರರ್ ಚಿತ್ರವಾಗಿರಲಿದೆ. ದಿ ರಾಜಾ ಸಾಬ್ ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಇದರಲ್ಲಿ ನಟ ಪ್ರಭಾಸ್ ಲುಂಗಿ ತೊಟ್ಟು ವಿಭಿನ್ನವಾಗಿ ಡ್ಯಾಶಿಂಗ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಭಾಸ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಈ ಹಬ್ಬದಂದು ನಾನು ರಾಜಾ ಸಾಬ್‌ನ ಫಸ್ಟ್ಲುಕ್ ಅನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದೇನೆ ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ. ಮೂಲಗಳ ಪ್ರಕಾರ, 'ದಿ ರಾಜಾ ಸಾಬ್' ತೆಲುಗು ಸೇರಿದಂತೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿರುವ ಪ್ಯಾನ್ ಇಂಡಿಯಾ ಚಿತ್ರ ಎನ್ನಲಾಗುತ್ತಿದೆ.