ಕಳೆದ ಶುಕ್ರವಾರ ಅದ್ಧೂರಿಯಾಗಿ ತೆರೆಕಂಡ ಬಹುನಿರೀಕ್ಷಿತ 'ಸಲಾರ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಗಳಿಕೆ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂ.ಗಳ ಗಡಿ ದಾಟಿದೆ. ತೆರೆಕಂಡ ಒಂದು ವಾರದಲ್ಲೇ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ 300 ಕೋಟಿ ರೂ. ಗಡಿ ದಾಟುವಲ್ಲಿ ಯಶ ಕಂಡಿದೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಮುಖ್ಯಭೂಮಿಕೆಯ ಸಲಾರ್ ತೆರೆಕಂಡು ಒಂದು ವಾರ ಕಳೆದಿದೆ.
ಸಲಾರ್ ಭಾಗ 1 ಕಳೆದ ಶುಕ್ರವಾರ ಪಂಚ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಯಿತು. ಭಾರತೀಯ ಗಲ್ಲಾಪೆಟ್ಟಿಗೆಯಲ್ಲೇ ಅದ್ಭುತ ಆರಂಭ ಕಂಡಿದೆ. ತೆರೆಕಂಡ ಮೊದಲ ದಿನವೇ 90 ಕೋಟಿ ರೂಪಾಯಿ ಗಳಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅತಿದೊಡ್ಡ ಓಪನರ್ ಆಗಿ ಹೊರಹೊಮ್ಮಿತು. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಚಿತ್ರವು ಏಳು ದಿನಗಳಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 308.90 ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ.
ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಲಾರ್ ಬಿಡುಗಡೆ ಆದ ಏಳನೇ ದಿನ ಭಾರತದಲ್ಲಿ 13.50 ಕೋಟಿ ರೂ. ಗಳಿಸಿದೆ. ತೆರೆಕಂಡ ಐದನೇ ದಿನ ವಿಶ್ವಾದ್ಯಂತ 500 ಕೋಟಿ ರೂ. ಗಡಿ ದಾಟಿದೆ ಎಂದು ಚಿತ್ರತಂಡ ಹೇಳಿಕೊಂಡಿರುವುದರಿಂದ, ಜಾಗತಿಕ ಕಲೆಕ್ಷನ್ ಸದ್ಯ 550 ಕೋಟಿ ರೂಪಾಯಿ ಸಮೀಪಿದೆ. ಈ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಮೂರು ಸಿನಿಮಾಗಳು 500 ಕೋಟಿ ರೂ. ಕ್ಲಬ್ ಸೇರಿದೆ. 500 ಕೋಟಿ ದಾಟಿರುವ ಮೂರು ಯಶಸ್ವಿ ಸಿನಿಮಾಗಳನ್ನು ಹೊಂದಿರುವ ದಕ್ಷಿಣ ಭಾರತದ ಏಕೈಕ ನಟ ಇವರು. ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡು ಚಿತ್ರಗಳಾದ ಜೈಲರ್ (650 ಕೋಟಿ ರೂ.) ಮತ್ತು 2.0 (800 ಕೋಟಿ ರೂ.) ಕೂಡ 500 ಕೋಟಿ ದಾಟಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.