ಚುನಾವಣೆಯಲ್ಲಿ ಸಿನಿಮಾ ರಂಗದ ದಿಗ್ಗಜರು ತಮ್ಮ ಮೆಚ್ಚಿನ ಅಭ್ಯರ್ಥಿ ಹಾಗೂ ಪಕ್ಷಗಳ ಪರ ಮತಯಾಚನೆ ಮಾಡುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ರಾಜಕೀಯ ಪಕ್ಷಗಳೂ ಸಹ ಮತದಾರರನ್ನು ಸೆಳೆಯಲು ಸ್ಟಾರ್ ಕಲಾವಿದರನ್ನು ಪ್ರಚಾರಕರನ್ನಾಗಿ ಬಳಸಿಕೊಳ್ಳುತ್ತವೆ. ನಟ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ವದಂತಿಗೆ ಎರಡು ದಿನದ ಹಿಂದೆ ಸ್ಪಷ್ಟನೆ ಸಿಕ್ಕಿದೆ. ಸ್ವತಃ ಸುದೀಪ್ ಅವರೇ ಹೇಳಿಕೆ ಕೊಡುವ ಮೂಲಕ ರಾಜಕೀಯದ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಬಿಜೆಪಿ ಪಕ್ಷ ಸೇರಲ್ಲ, ಆದ್ರೆ ಸಿಎಂ ಬೊಮ್ಮಾಯಿ ಪರ ಪ್ರಚಾರ ಮಾಡುತ್ತೇನೆಂದು ತಿಳಿಸಿದ್ದಾರೆ.
ಕನ್ನಡ ಚಿತ್ರರಂಗ ಅಲ್ಲದೇ ಬಹು ಭಾಷೆಯಲ್ಲಿ ತಮ್ಮ ಪ್ರತಿಭೆ ಸಾಬೀತು ಪಡಿಸಿರುವ ಸುದೀಪ್ ಸದ್ಯ ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆ. ಸಿನಿಮಾ, ಕ್ರಿಕೆಟ್, ರಿಯಾಲಿಟಿ ಶೋ ಮೂಲಕ ತಮ್ಮದೇ ಛಾಪು ಮೂಡಿಸಿರುವ ಸುದೀಪ್ ರಾಜಕೀಯದಲ್ಲಿ ಹುಷಾರಾಗಿ ಹೆಜ್ಜೆ ಇಡುತ್ತಿದ್ದಾರೆ. ಹೌದು, ಸಿಎಂ ಬಸವರಾಜ ಬೊಮ್ಮಾಯಿ ಮಾತಿಗೆ ಬೆಲೆ ಕೊಟ್ಟು ಸುದೀಪ್ ಬಿಜೆಪಿ ಪಕ್ಷದ ಪರವಾಗಿ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡಲಿದ್ದಾರೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದ ಅರ್ಧದಷ್ಟು ಸೆಲೆಬ್ರಿಟಿಗಳು ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ಈಗಾಗ್ಲೇ ಬಿಜೆಪಿ ಪಕ್ಷದ ಪರವಾಗಿ ಕೆಲ ಸ್ಟಾರ್ ನಟ, ನಟಿಯರು ಕೆಲಸ ಮಾಡುತ್ತಿದ್ದು ಎಲೆಕ್ಷನ್ ಪ್ರಚಾರದ ವೇಳೆ ದೊಡ್ಡ ಮಟ್ಟದಲ್ಲಿ ಪ್ಲಸ್ ಪಾಯಿಂಟ್ ಆಗಲಿದೆ. ಸುದೀಪ್ ಬಳಿಕ ಕನ್ನಡದಲ್ಲಿ ಮುಂಚೂಣಿಯಲ್ಲಿರುವ ಸ್ಟಾರ್ ನಟರು ಬಿಜೆಪಿ ಪಕ್ಷದ ಪರವಾಗಿ ಕ್ಯಾಂಪೇನ್ ಮಾಡೋದು ಪಕ್ಕಾ ಅಂತಿದ್ದಾರೆ ಗಾಂಧಿನಗರದ ಸಿನಿಮಾ ಪಂಡಿತರು.
ಈಗಾಗಲೇ ಪಕ್ಷದಲ್ಲಿ ಗುರುತಿಸಿಕೊಂಡಿರುವ ಮಾಳವಿಕ ಅವಿನಾಶ್, ಶೃತಿ, ತಾರಾ ಅನುರಾಧಾ, ಶಿಲ್ಪಾ ಗಣೇಶ್ ಸೇರಿ ಇನ್ನೂ ಹಲವು ತಾರೆಯರು ಬಿಜೆಪಿ ಪಕ್ಷ ಹಾಗು ಅಭ್ಯರ್ಥಿಗಳ ಪರವಾಗಿ ಸ್ಟಾರ್ ಪ್ರಚಾರಕರಾಗುವ ಸಾಧ್ಯತೆಯಿದೆ. ಶಿಲ್ಪಾ ಗಣೇಶ್ ಅವರೊಂದಿಗೆ ಗಣೇಶ್ ಕೂಡ ಬರಬಹುದು. ಜೊತೆಗೆ ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಹೈಕಮಾಂಡ್ ಸೂಚಿಸುವ ಅಭ್ಯರ್ಥಿ ಪರ ಜಗ್ಗೇಶ್ ಪ್ರಚಾರ ಮಾಡಲಿದ್ದಾರೆ.