2023ರ ಕೊನೆಯಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟ ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ತೆರೆಕಂಡು ರಾಜ್ಯಾದ್ಯಂತ ಅಬ್ಬರಿಸುತ್ತಿದೆ. ಇದೊಂದು ನೈಜ ಘಟನಾಧರಿತ ಕಥೆ ಎಂದು ಹೇಳಿಕೊಂಡು ಬಂದಿದ್ದ ಚಿತ್ರತಂಡದ ಮಾತೀಗ ನಿಜವಾಗಿದೆ. ನಿನ್ನೆ ಮಧ್ಯರಾತ್ರಿಯೇ ಅಭಿಮಾನಿಗಳು ಸಂಭ್ರಮಾಚರಿಸಿದ್ದಾರೆ. ಕಾಟೇರ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನಗೊಳ್ಳುವ ಮೂಲಕ ಸಿನಿಪ್ರಿಯರಿಂದ ಜೈಕಾರ ಹಾಕಿಸಿಕೊಳ್ಳುತ್ತಿದೆ.
ಕಾಟೇರ ನಾಯಕಿ ಆರಾಧನಾ ರಾಮ್, ತಾಯಿ ಮಾಲಾಶ್ರೀ ಜೊತೆ ಬೆಂಗಳೂರಿನ ಅನುಪಮ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದರು. ಆ ಸಂದರ್ಭದಲ್ಲಿ ನಟಿ ಶೃತಿ ಕೂಡ ಫ್ಯಾನ್ಸ್ ಜೊತೆ ಕುಳಿತು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಅಲ್ಲದೇ ಸೆಲೆಬ್ರೇಷನ್ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುವ ಅಭಿಮಾನಿಗಳು ಸೂಪರ್ ಹಿಟ್, ಬ್ಲಾಕ್ಬಸ್ಟರ್, ಅದ್ಭುತ ಚಿತ್ರ ಎಂದೆಲ್ಲಾ ತಿಳಿಸುತ್ತಿದ್ದಾರೆ.
ಕಥೆ ಏನು?: 1989ರ ಸಮಯ, ಭೀಮನಹಳ್ಳಿ ಹಾಗೂ ಹಾನಹಳ್ಳಿ ಜನರು ಊರ ಜಾತ್ರೆಗೆ ಸಿದ್ಧತೆ ನಡೆಸಿರುತ್ತಾರೆ. ತನ್ನ ಊರಿಗಾಗಿ ಹೋರಾಡಿ ಜೈಲು ಸೇರಿದ 'ಕಾಟೇರ'ನಿಗೆ ಇಡೀ ಊರು ಕಾಯುತ್ತಿರುತ್ತದೆ. 10 ದಿನಗಳ ಕಾಲ ಪೆರೋಲ್ ಮೇಲೆ ಹೊರಬರುವ ಆತ ಊರಿನ ಹಾದಿ ಹಿಡಿಯುತ್ತಾನೆ. ಮತ್ತೊಂದು ಕಡೆ ನಾಲೆ ಅಗೆಯುವಾಗ ಒಂದೇ ಜಾಗದಲ್ಲಿ 107ರ ಜನರ ಅಸ್ತಿಪಂಜರ ಸಿಕ್ಕಿರುತ್ತದೆ. ಅದು ಯಾರ ಅಸ್ಥಿಪಂಜರ? ಒಮ್ಮೆಲೆ ಅಷ್ಟು ಜನ ಸತ್ತು ಮಣ್ಣಾಗಿದ್ದು ಹೇಗೆ? ಅವರಿಗೂ ಕಾಟೇರನಿಗೂ ಏನು ಸಂಬಂಧ? 70ರ ದಶಕದಲ್ಲಿ ಆ ಎರಡೂ ಊರುಗಳಲ್ಲಿ ನಡೆದ ಘಟನೆಗಳೇನು? ಕಾಟೇರ ಯಾವ ವಿಷ್ಯಕ್ಕೆ ಜೈಲು ಸೇರಿದ? ಎಂಬುದನ್ನು ತಿಳಿದುಕೊಳ್ಳಬೇಕಾದರೆ ನೀವು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲೇಬೇಕು.
'ಕಾಟೇರ' ಕಂಪ್ಲೀಟ್ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ. ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮೇಲು ಕೀಳು ಎನ್ನುವ ಬೇಧ ಭಾವ ಆ ಕಾಲದಲ್ಲಿ ಎಷ್ಟರ ಮಟ್ಟಿಗಿತ್ತು ಎಂಬುದನ್ನು ತೋರಿಸಲಾಗಿದೆ. ಇದರ ಜೊತೆಗೆ ಉಳುವವನೇ ಭೂಮಿಯ ಒಡೆಯ ಕಾಯ್ದೆ ದೇಶದಲ್ಲಿ ಎಂಥ ಬದಲಾವಣೆ ತಂದಿತ್ತು ಎಂಬುದರ ಬಗ್ಗೆಯೂ ಬೆಳಕು ಚೆಲ್ಲುತ್ತದೆ.
ನಟ ದರ್ಶನ್ ಸಿನಿಮಾ ಕೆರಿಯರ್ನಲ್ಲಿ ಕಾಟೇರ ಮಹತ್ವದ ಚಿತ್ರ ಅಂದ್ರೆ ತಪ್ಪಿಲ್ಲ. ದರ್ಶನ್ ಕುಲುಮೆ ಕೆಲಸ ಮಾಡುವ ಪಕ್ಕಾ ಹಳ್ಳಿ ಹೈದನಾಗಿ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ. ಕ್ಲೈಮಾಕ್ಸ್ನಲ್ಲಿ ವಯಸ್ಸಾದ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪರಿ ನೋಡಿದ್ರೆ ನಿಜಕ್ಕೂ ದಾಸನ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ.