ಸ್ಯಾಂಡಲ್ವುಡ್ನ ಸೂಪರ್ ಹಿಟ್ ಸಿನಿಮಾ 'ಮುಂಗಾರು ಮಳೆ' ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಕನ್ನಡಿಗರ ಮನಗೆದ್ದ ನಟಿ ಪೂಜಾ ಗಾಂಧಿ ಗೆಳೆಯ ವಿಜಯ್ ಘೋರ್ಪಡೆ ಜೊತೆ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಬುಧವಾರದಂದು ಬೆಂಗಳೂರಿನ ಯಲಹಂಕ ಬಳಿ ಖಾಸಗಿ ರೆಸಾರ್ಟ್ನಲ್ಲಿ ಪೂಜಾ ಗಾಂಧಿ ಅವರು ಕುವೆಂಪು ಆಶಯದ ಮಂತ್ರಮಾಂಗಲ್ಯ ಪದ್ಧತಿಯಲ್ಲಿ ಮದುವೆ ಆಗಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪಂಜಾಬ್ ಮೂಲದ ಪೂಜಾ ಗಾಂಧಿ ಸದ್ಯ ಕರ್ನಾಟಕದ ಮನೆ ಮಗಳು. ಸಿನಿಮಾ ಜೊತೆ ಜೊತೆಗೆ ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದರು. ಹಲವು ವರ್ಷಗಳಿಂದ ತಮ್ಮ ಕನ್ನಡಾಭಿಮಾನದ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಇದೀಗ ಕನ್ನಡಿಗ ವಿಜಯ್ ಅವರನ್ನು ವರಿಸಿ ಕರುನಾಡಿನ ಸೊಸೆ ಆಗಿದ್ದಾರೆ. ನಿನ್ನೆ ಸಂಜೆ ನಡೆದ ಪೂಜಾಗಾಂಧಿ ಹಾಗೂ ವಿಜಯ್ ಘೋರ್ಪಡೆ ಮದುವೆಗೆ ಚಿತ್ರರಂಗದ ಸ್ನೇಹಿತರು, ರಾಜಕಾರಣಿಗಳು ಹಾಗೂ ಸಂಬಂಧಿಕರು ಭಾಗಿಯಾಗಿದ್ದರು.
ಉತ್ತರಪ್ರದೇಶದ ಮೀರತ್ನಲ್ಲಿ 1983ರ ಅಕ್ಟೋಬರ್ 7ರಂದು ಜನಿಸಿದ ಪೂಜಾ ಗಾಂಧಿ ದೆಹಲಿಯಲ್ಲಿ ಬೆಳೆದು ವಿದ್ಯಾಭ್ಯಾಸ ಪಡೆದರು. ಪವನ್ ಗಾಂಧಿ ಮತ್ತು ಜ್ಯೋತಿ ಗಾಂಧಿ ಪುತ್ರಿ. ರಾಧಿಕಾ ಗಾಂಧಿ ಮತ್ತು ಸುಹಾನಿ ಗಾಂಧಿ ಎಂಬ ಇಬ್ಬರು ಸಹೋದರಿಯರಿದ್ದಾರೆ. ಆರಂಭದಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿದರು. ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಮೊದಲು ಹಿಂದಿ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡು ನಂತರ ಕನ್ನಡಕ್ಕೆ ಎಂಟ್ರಿ ಕೊಟ್ಟರು.