ನಟಿಸಿದ ಚೊಚ್ಚಲ ಚಿತ್ರದಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದ ನಟಿ ಪೂಜಾ ಗಾಂಧಿ. 2006ರ ಡಿಸೆಂಬರ್ನಲ್ಲಿ ತೆರೆಕಂಡ ಮುಂಗಾರು ಮಳೆ ಸೂಪರ್ ಹಿಟ್ ಆಗಿ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೂ ಕೂಡ ಈ ಚೊಚ್ಚಲ ಚಿತ್ರ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. ಅದಾದ ಬಳಿಕ ಕೆಲ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು ಸದ್ಯ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಮಳೆ ಹುಡುಗಿ ಎಂದೇ ಖ್ಯಾತರಾಗಿದ್ದ ಅವರು ಸದ್ಯ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ? ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಆದ್ರೆ ಇತ್ತೀಚೆಗಷ್ಟೇ ಕನ್ನಡ ಬರಹದ ಮೂಲಕ ಗಮನ ಸೆಳೆದಿದ್ದ ಅವರು ಇದೀಗ ನಟಿ ರಮ್ಯಾ ಬಗ್ಗೆ ಗುಣಗಾನ ಮಾಡಿ ಸುದ್ದಿಯಲ್ಲಿದ್ದಾರೆ.
ನಟ ರಮೇಶ್ ಅರವಿಂದ್ ನಿರೂಪಣೆಯ 'ವೀಕೆಂಡ್ ವಿತ್ ರಮೇಶ್' ಶೋ ಮತ್ತೆ ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಪ್ರಸಾರವಾಗಲಿದೆ. ಮೋಹಕತಾರೆ ರಮ್ಯಾ ಅವರ ಸಾಧನೆಯ ಕಥೆ ಮೊದಲ ಎಪಿಸೋಡ್. ನಟಿ ರಮ್ಯಾ ಕಥೆ ಹೇಳಲು ರಮೇಶ್ ಅರವಿಂದ್ ರೆಡಿಯಾಗಿದ್ದಾರೆ. ಮೊದಲ ಅತಿಥಿಯಾಗಿ ರಮ್ಯಾ ಭಾಗಿಯಾಗಲಿದ್ದು, ಈ ಬಗ್ಗೆ ಪೂಜಾ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಟಿ ಪೂಜಾ ಗಾಂಧಿ ಬರಹ: ವೀಕೆಂಡ್ ವಿತ್ ರಮೇಶ್ ಎಂಬ ಶೀರ್ಷಿಕೆ ಇರುವ ಬರಹದಲ್ಲಿ, ''ರಮೇಶ್ ಸರ್, ನಿಮ್ಮ ಮತ್ತು ರಮ್ಯಾ ಮಧ್ಯೆ ನಡೆಯುವ ಮಾತಿ ಜುಗಲ್ ಬಂದಿ ನೋಡೋಕ್ಕೆ ಲಕ್ಷಾಂತರ ಕನ್ನಡಿಗರ ರೀತಿ ನಾನೂ ಕೂಡ ಕಾತುರದಿಂದ ಕಾಯುತ್ತಿದ್ದೆನೆ. ನನಗೆ ಏಕೆ ವೈಯಕ್ತಿಕವಾಗಿ ಇಷ್ಟ ಆಗ್ತಾರೆ ಅಂದ್ರೆ, ಅವರು ನಟಿಯರ ಪರ ನಿಲ್ಲುತ್ತಾರೆ. ಆಕೆಯಲ್ಲಿನ ಆ ಗುಣ ನನಗೆ ಬಹಳ ಇಷ್ಟ. ನನಗೆ ಈಗಲೂ ತುಂಬಾ ಚೆನ್ನಾಗಿ ನೆನಪಿದೆ, ನಾನು ಚುನಾವಣೆಯಲ್ಲಿ ಕೆಟ್ಟದಾಗಿ ಸೋತಾಗ ಅವರು 'ಪೂಜಾ ಗಾಂಧಿ ಉತ್ತಮ ಪ್ರಯತ್ನ' ಎಂದು ಹೇಳಿದ್ದರು. ರಮ್ಯಾ ನಿಮ್ಮ ಪ್ರೊಡಕ್ಷನ್ ಕಂಪನಿಗೆ ಶುಭವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರ ಮಟ್ಟದ ಕನ್ನಡ ಸಿನಿಮಾಗಳು ಮೂಡಿ ಬರಲಿ'' ಎಂದು ಕನ್ನಡದಲ್ಲಿ ಪತ್ರ ಬರೆದಿದ್ದಾರೆ.