ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಪ್ಯಾನ್ ಇಂಡಿಯಾ ಚಿತ್ರ ತಮಿಳಿನ 'ಪೊನ್ನಿಯಿನ್ ಸೆಲ್ವನ್'. ಮಣಿರತ್ನಂ ನಿರ್ದೇಶನ ಮಾಡಿರುವ ಈ ಚಿತ್ರ ಈಗಾಗಲೇ ಟೀಸರ್ ಮತ್ತು ಟ್ರೈಲರ್‌ಗಳ ಮೂಲಕವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಇದೇ ತಿಂಗಳು 30ಕ್ಕೆ ವಿಶ್ವಾದ್ಯಂತ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರಕ್ಕಾಗಿ ನಟ ವಿಕ್ರಮ್, ಕಾರ್ತೀ , ಜಯಂ ರವಿ, ತ್ರಿಶಾ, ಐಶ್ವರ್ಯ ಲಕ್ಷ್ಮೀ ಸೇರಿದಂತೆ ಚಿತ್ರತಂಡ ಬೆಂಗಳೂರಿಗೆ ಬಂದು ಈ ಸಿನಿಮಾದ ವಿಶೇಷತೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡರು.
ಇದನ್ನೂ ಓದಿ:ಪೊನ್ನಿಯಿನ್ ಸೆಲ್ವನ್-1.. ಐಶ್ವರ್ಯಾ ರೈ ಬಚ್ಚನ್, ತ್ರಿಶಾ ಫಸ್ಟ್ ಲುಕ್ ರಿವೀಲ್
ನಟ ವಿಕ್ರಮ್ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದರು. ಇದು ಮಣಿರತ್ನಂ ಅವರ 'ಕನಸಿನ ಸಿನಿಮಾ'. ಈ ಸಿನಿಮಾ ಕೇವಲ ತಮಿಳು ಭಾಷೆಗೆ ಸೀಮಿತ ಅಲ್ಲ. ಕಾದಂಬರಿ ಆಧಾರಿತ ಇತಿಹಾಸದ ಜೊತೆಗೆ ಫ್ಯಾಂಟಸಿ ಕಥೆ. 1955ರಲ್ಲಿ ಚೋಳರ ಆಳ್ವಿಕೆಯ ಸುತ್ತ ಹಾಗೂ ತಮಿಳುನಾಡಿನ ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದ ಸಿನಿಮಾ. 500 ವರ್ಷಗಳ ಹಿಂದೆ ನಿಮ್ಮನ್ನೆಲ್ಲ ಕರೆದುಕೊಂಡು ಹೋಗಲಿದೆ. ಈ ಚಿತ್ರದಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಹಕ್ಕು ಇದೆ. ನಾನು ಚಿಕ್ಕವನಿದ್ದಾಗ ಓದಿದ ಕಥೆಗೆ ಇದೀಗ ಹೀರೋ ಆಗಿ ಅಭಿನಯಿಸುತ್ತಿದ್ದೇನೆ ಎಂದರು.
ನಟ ಜಯಂ ರವಿ ಮಾತನಾಡಿ, ಬೆಂಗಳೂರಿಗೂ ನನಗೆ ತುಂಬಾ ಹತ್ತಿರದ ನಂಟು. ಯಾಕೆಂದರೆ ನನ್ನ ಸ್ನೇಹಿತರು ಬೆಂಗಳೂರಿನಲ್ಲಿ ತುಂಬಾ ಜನ ಇದ್ದಾರೆ. ನಮ್ಮ ಸಿನಿಮಾ ಪ್ರಮೋಷನ್ಗಾಗಿ ಬೆಂಗಳೂರಿಗೆ ಬಂದಿರುವುದು ಖುಷಿ ತಂದಿದೆ ಎಂದರು. ನಟ ಕಾರ್ತೀ ಮಾತನಾಡಿ, ಈಗಾಗಲೇ ಬಾಹುಬಲಿ, ಕೆಜಿಎಫ್ ಅಂತಹ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದಿದೆ. ಆ ರೀತಿಯ ಒಂದು ಕಥೆ ಪೊನ್ನಿಯಿನ್ ಸೆಲ್ವನ್ ಸಿನಿಮಾ. ಇದು ಮಣಿರತ್ನಂ ಅವರ 40 ವರ್ಷಗಳ ಕನಸು. ಇಂತಹ ಸಿನಿಮಾದಲ್ಲಿ ನಾನು ಒಂದು ಭಾಗ ಆಗಿರುವುದು ಹೆಮ್ಮೆ ಇದೆ ಎಂದರು.