ಬಹುನಿರೀಕ್ಷಿತ 'ಪೊನ್ನಿಯನ್ ಸೆಲ್ವನ್ 2 ಚಿತ್ರ ಶುಕ್ರವಾರ ತೆರೆ ಕಂಡಿದ್ದು, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ವಿಮರ್ಷಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಸಂಪಾದಿಸಿದೆ. ಸಿನಿಮಾವು ತೆರೆಕಂಡ ಮೊದಲ ದಿನ 32 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ 24 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿತ್ತು. ನಿನ್ನೆ 3 ದಿನ ಭಾನುವಾರ ಆದ್ದರಿಂದ ಸಿನಿಮಾ ಉತ್ತಮ ಗಳಿಕೆ ಕಂಡಿದೆ. ಕೇವಲ ಮೂರೇ ದಿನದಲ್ಲಿ ಚಿತ್ರ 150 ಕೋಟಿ ರೂಪಾಯಿ ಬಾಚಿಕೊಂಡಿದೆ.
ಈ ಅಂಕಿ ಅಂಶದೊಂದಿಗೆ ಚಿತ್ರವು ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಪ್ರಾಬಲ್ಯ ಸಾಧಿಸಲಿದೆ. ಮೂರನೇ ದಿನವೂ ಗಲ್ಲಾಪೆಟ್ಟಿಗೆಯಲ್ಲಿ ವಿಕ್ರಮ್ ಮತ್ತು ಐಶ್ವರ್ಯಾ ರೈ ಅವರ ಚಿತ್ರವು ಯಶಸ್ವಿಯಾಗಿದೆ. ದಕ್ಷಿಣದ ಟಾಪ್ ಡೈರೆಕ್ಟರ್ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 2 ಹೆಚ್ಚಿನ ಉತ್ಸಾಹ ಮತ್ತು ನಿರೀಕ್ಷೆಯ ನಡುವೆ ಬಿಡುಗಡೆಯಾಗಿದ್ದು, ಅದರಂತೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಎರಡು ಭಾಗಗಳ ಐತಿಹಾಸಿಕ ಸಾಹಸಗಾಥೆ ಸಿನಿಪ್ರಿಯರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
ಕೇವಲ ಮೂರೇ ದಿನದಲ್ಲಿ ಚಿತ್ರ ಅದ್ಭುತ ಕಲೆಕ್ಷನ್ ಮಾಡಿದೆ. ಪೊನ್ನಿಯನ್ ಸೆಲ್ವನ್ 2 ಭಾರತ ಮತ್ತು ವಿದೇಶಗಳ ಬಾಕ್ಸ್ ಆಫೀಸ್ನಲ್ಲಿ ಲಾಭದಾಯಕ ಓಟ ಮುಂದುವರೆಸಿದೆ. ಮೂರು ದಿನಗಳಲ್ಲಿ 150 ಕೋಟಿ ಗಳಿಸಿದೆ ಎಂದು ವ್ಯಾಪಾರ ತಜ್ಞ ರಮೇಶ್ ಬಾಲಾ ತಮ್ಮ ಟ್ವೀಟ್‌ನಲ್ಲಿ ಖಚಿತಪಡಿಸಿದ್ದಾರೆ. ವಾರಾಂತ್ಯದಲ್ಲಿ ಯಶಸ್ವಿ ಪ್ರದರ್ಶನದ ನಂತರ ವಾರದ ದಿನಗಳಲ್ಲಿ ವೀಕ್ಷಕರ ಪ್ರತಿಕ್ರಿಯೆಗಾಗಿ ಚಿತ್ರತಂಡ ಕಾಯುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಾದ ಉತ್ತರ ಅಮೆರಿಕದಲ್ಲಿ ಚಿತ್ರವು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ.