ಶುಕ್ರವಾರ ತೆರೆಕಂಡಿರುವ 'ಪೊನ್ನಿಯಿನ್ ಸೆಲ್ವನ್ 2' (Ponniyin Selvan 2) ಮಿರ್ಷಕರು ಮತ್ತು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಸಂಪಾದಿಸಿದೆ. ಇತ್ತ ಗಲ್ಲಾಪೆಟ್ಟಿಗೆಯಲ್ಲೂ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ ಸಂಖ್ಯೆ ಎರಡಂಕಿಯಿಂದ ಆರಂಭವಾಗಿದ್ದು, ಚಿತ್ರ ಗೆಲ್ಲುವ ವಿಶ್ವಾಸದಲ್ಲಿ ಚಿತ್ರತಂಡವಿದೆ.
'ಪೊನ್ನಿಯಿನ್ ಸೆಲ್ವನ್ 2' ತೆರೆಕಂಡ ಮೊದಲ ದಿನ 32 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನ 24 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಸಫಲವಾಗಿದೆ. ಇಂದು ಭಾನುವಾರ ರಜಾ ದಿನ ಹಿನ್ನೆಲೆ ಕಲೆಕ್ಷನ್ ಉತ್ತಮವಾಗಿರಲಿದೆ ಅಂತಾರೆ ಸಿನಿ ಪಂಡಿತರು. ಎರಡೇ ದಿನಗಳಲ್ಲಿ 50 ಕೋಟಿ ರೂಪಾಯಿ ದಾಟಿರುವ ಸಿನಿಮಾ ಶೀಘ್ರವೇ 100 ಕೋಟಿ ಕ್ಲಬ್ ಸೇರಲಿದೆ ಅಂತಾರೆ ಅಭಿಮಾನಿಗಳು.
ಎರಡನೇ ದಿನದ ಬಾಕ್ಸ್ ಆಫೀಸ್ ಫಲಿತಾಂಶಗಳ ಪ್ರಕಾರ, ವಿಕ್ರಮ್ ಮತ್ತು ಐಶ್ವರ್ಯಾ ರೈ ಅವರ ಈ ಚಿತ್ರವು ಯಶಸ್ವಿಯಾಗಿದೆ. ದಕ್ಷಿಣದ ಟಾಪ್ ಡೈರೆಕ್ಟರ್ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 2 ಹೆಚ್ಚಿನ ಉತ್ಸಾಹ ಮತ್ತು ನಿರೀಕ್ಷೆಯ ನಡುವೆ ಬಿಡುಗಡೆಯಾಗಿದ್ದು, ಅದರಂತೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಎರಡು ಭಾಗಗಳ ಐತಿಹಾಸಿಕ ಸಾಹಸಗಾಥೆ ಸಿನಿಪ್ರಿಯರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಮೊದಲ ಚಿತ್ರವು ಜಾಗತಿಕವಾಗಿ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಎರಡನೇ ಭಾಗ ಇನ್ನೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ವಿಕ್ರಮ್, ಕಾರ್ತಿ, ಐಶ್ವರ್ಯ ರೈ ಬಚ್ಚನ್, ಜಯಂ ರವಿ, ತ್ರಿಶಾ ಕೃಷ್ಣನ್, ಶೋಭಿತಾ ಧೂಳಿಪಾಲ, ಐಶ್ವರ್ಯ ಲಕ್ಷ್ಮಿ, ಪ್ರಕಾಶ್ ರಾಜ್ ಮತ್ತು ವಿಕ್ರಮ್ ಪ್ರಭು ಸೇರಿದಂತೆ ಹಲವರು ಅಭಿನಯಿಸಿರುವ ಈ ಚಿತ್ರ ಚೋಳ ಸಾಮ್ರಾಜ್ಯದ ಇತಿಹಾಸವನ್ನು ವಿವರಿಸಿದೆ. ಚಿತ್ರವು 3,200ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಿದೆ. ಮುಂಗಡ ಟಿಕೆಟ್ ಬುಕಿಂಗ್ನಲ್ಲೇ 11 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ.