ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್ 2' ಬಿಡುಗಡೆಯಾದ ಮೊದಲ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊದಲ ಮೂರು ದಿನ ಉತ್ತಮ ವ್ಯವಹಾರ ನಡೆಸಿದ್ದು ನಾಲ್ಕನೇ ದಿನವೂ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದೆ. ನಾಲ್ಕನೇ ದಿನದ ಅಂಕಿಅಂಶ ಕೂಡ ಬಾಕ್ಸ್ ಆಫೀಸ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ.
ವಿಕ್ರಮ್ ಮತ್ತು ಐಶ್ವರ್ಯಾ ರೈ ಸೇರಿದಂತೆ ಬಿಗ್ ಸ್ಟಾರ್ ಕಾಸ್ಟ್ ಹೊಂದಿರುವ ಚಿತ್ರ ಕಳೆದ ಶುಕ್ರವಾರ (29-4-23) ತೆರೆ ಕಂಡಿತು. ವಿಮರ್ಶಕರು, ಸಿನಿಪ್ರಿಯರು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸುತ್ತಿರುವ ಚಿತ್ರ ತೆರೆ ಕಂಡ ದಿನ ದೇಶಿಯ ಮಾರುಕಟ್ಟೆಯಲ್ಲಿ 32 ಕೋಟಿ ರೂಪಾಯಿ, ಎರಡನೇ ದಿನ 24 ಕೋಟಿ ರೂಪಾಯಿ, ಮೂರನೇ ದಿನ ಒಟ್ಟು 150 ಕೋಟಿಗೆ ತಲುಪಿದ್ದು ನಾಲ್ಕೇ ದಿನದಲ್ಲಿ 200 ಕೋಟಿ ರೂ. (ಪ್ರಪಂಚದಾದ್ಯಂತ) ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.
ಭಾರತದಲ್ಲಿ ನಾಲ್ಕನೇ ದಿನಕ್ಕೆ 24 ಕೋಟಿ ರೂ ಗಳಿಸಿದೆ ಎಂದು ಸಿನಿಮೋದ್ಯಮದ ವ್ಯವಹಾರ ತಜ್ಞ ಸ್ಯಾಕ್ನಿಲ್ಕ್ (Sacnilk) ಹೇಳಿದ್ದಾರೆ. ಈ ಮೂಲಕ ಸಿನಿಮಾ ಅಧಿಕೃತವಾಗಿ 100 ಕೋಟಿ ರೂ ಕ್ಲಬ್ ಸೇರಿದೆ. ಪ್ರಸ್ತುತ ದೇಶೀಯ ಒಟ್ಟು ಕಲೆಕ್ಷನ್ 105.02 ಕೋಟಿ ರೂ. ಆಗಿದೆ.
ತಮಿಳುನಾಡು ಈ ಚಿತ್ರಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದೆ. ಸೋಮವಾರದಂದು ಶೇ. 58.04ರಷ್ಟು ಆಕ್ಯುಪೆನ್ಸಿ ದರ (ಆಸನ ಭರ್ತಿ) ಇತ್ತು. ಅಂಕಿಅಂಶಗಳ ಪ್ರಕಾರ ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಚಿತ್ರದ ಆಕ್ಯುಪೆನ್ಸಿ ದರ ಶೇ. 14.21ರಷ್ಟಿದೆ. ತೆಲುಗು ಮತ್ತು ಮಲಯಾಳಂ ಆವೃತ್ತಿ ಶೇ. 25.66ರಷ್ಟು ಪ್ರೇಕ್ಷಕರನ್ನು ಹೊಂದಿತ್ತು.
ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧರಿಸಿದ ಈ ಚಿತ್ರವು ವಿಶ್ವಾದ್ಯಂತ 200 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ತಡೆಗೋಡೆಗಳನ್ನು ದಾಟಿ ಮುಂದೆ ಸಾಗುತ್ತಿದೆ ಎಂದು ಆದಿತಾ ಕರಿಕಾಳನ್ ಪಾತ್ರದಲ್ಲಿ ನಟಿಸಿರುವ ನಟ ವಿಕ್ರಮ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಮೆಟ್ ಗಾಲಾ 2023: ರೆಡ್ ಕಾರ್ಪೆಟ್ ಮೇಲೆ ಪ್ರಿಯಾಂಕಾ, ಆಲಿಯಾ, ಇಶಾ ಅಂಬಾನಿ ಝಲಕ್!
'ಪೊನ್ನಿಯಿನ್ ಸೆಲ್ವನ್ 2' ಚಲನಚಿತ್ರವು ಎರಡು ದೊಡ್ಡ ತಮಿಳು ಚಲನಚಿತ್ರಗಳಾದ ಬೀಸ್ಟ್ ಮತ್ತು ವರಿಸು ಗಳಿಕೆ ಮೀರಿಸುತ್ತದೆ ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಸೋಮವಾರ ತಿಳಿಸಿದ್ದರು. #PonniyinSelvan ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವಿಟ್ಟರ್‌ನಲ್ಲಿ, "ಇಂದು 'ಪೊನ್ನಿಯಿನ್ ಸೆಲ್ವನ್ 2' ಬೀಸ್ಟ್ (153.64 ಕೋಟಿ ರೂ.) ಮತ್ತು ವರಿಸು (195.20 ಕೋಟಿ ರೂ.)ನ ಒಟ್ಟು ಸಂಗ್ರಹವನ್ನು ದಾಟಲಿದೆ" ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ:ಮೂರೇ ದಿನದಲ್ಲಿ 150 ಕೋಟಿ ಬಾಚಿದ 'ಪೊನ್ನಿಯನ್ ಸೆಲ್ವನ್ 2': ವಿಕ್ರಮ್, ಐಶ್ವರ್ಯ ಚಿತ್ರ ಸೂಪರ್ ಹಿಟ್
ಪೊನ್ನಿಯಿನ್ ಸೆಲ್ವನ್ 2 ಮುಂದಿನ ಕೆಲ ದಿನಗಳಲ್ಲಿ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಏಕೆಂದರೆ ಈ ಸಿನಿಮಾಗೆ ಸದ್ಯ ಯಾವುದೇ ಸ್ಪರ್ಧೆ ಇಲ್ಲ. ಪ್ರೇಕ್ಷಕರು ಕೂಡ ಉತ್ತಮ ಪ್ರಚಾರ ಮಾಡುತ್ತಿದ್ದಾರೆ. ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ತ್ರಿಶಾ, ಕಾರ್ತಿ, ಐಶ್ವರ್ಯ ಲಕ್ಷ್ಮಿ, ಜಯಂ ರವಿ, ಶೋಭಿತಾ ಧೂಳಿಪಾಲ, ಪ್ರಭು, ಪ್ರಕಾಶ್ ರಾಜ್, ಆರ್ ಶರತ್‌ಕುಮಾರ್, ಜಯರಾಮ್, ಪಾರ್ಥಿಬನ್, ರೆಹಮಾನ್, ಮತ್ತು ವಿಕ್ರಮ್ ಪ್ರಭು ಒಳಗೊಂಡಿರುವ ತಾರಾಗಣವನ್ನು ಚಿತ್ರ ಹೊಂದಿದೆ.