ಕನ್ನಡ ಚಿತ್ರರಂಗದಲ್ಲೀಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳದ್ದೇ ಕಾರುಬಾರು. ವಿಭಿನ್ನ ಕಂಟೆಂಟ್ ಆಧಾರಿತ "Politics ಕಲ್ಯಾಣ'' ಎಂಬ ಸಿನಿಮಾ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆ ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಐಪ್ಲೆಕ್ಸ್ ಆಡಿಯೋ ಮೂಲಕ ಅನಾವರಣಗೊಂಡಿದೆ. ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಹಾಡುಗಳನ್ನು ಬಿಡುಗಡೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಈವೆಂಟ್ನಲ್ಲಿ ಐಪ್ಲೆಕ್ಸ್ ಸಂಸ್ಥೆಯ ಮೋಹನ್ ಉಪಸ್ಥಿತರಿದ್ದರು.
ಈ ಸಿನಿಮಾಗೆ ಸಂಭಾಷಣೆ ಬರೆದಿರೋ ಜೆ.ಎಂ ಪ್ರಹ್ಲಾದ್ ಮಾತನಾಡಿ, ಕನ್ನಡದಲ್ಲಿ ರಾಜಕೀಯ ಕುರಿತಾದ ಚಿತ್ರಗಳು ಸಾಕಷ್ಟು ಬಂದಿದೆ ಹಾಗೂ ಬರುತ್ತಿವೆ. ಆದರೆ, ರಾಜಕೀಯ ವಿಡಂಬನೆಯ ಕುರಿತಾದ ಚಿತ್ರಗಳು ಕಡಿಮೆ. "Politics ಕಲ್ಯಾಣ" ರಾಜಕೀಯ ವಿಡಂಬನೆಯ ಕುರಿತಾದ ಚಿತ್ರ. ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳನ್ನು ನಿರ್ಮಿಸಿರುವ ಗಣೇಶ್ ಕೃಷ್ಣಮೂರ್ತಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಾನು ಹೇಳಿದ ಕಥೆ ಮೆಚ್ಚಿ ಗಣೇಶ್ ಅವರು ನಿರ್ಮಾಣ ಮಾಡಿದರು. ಕವಿ ರಾಜೇಶ್ ಈ ಚಿತ್ರದ ನಿರ್ದೇಶಕರು. ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ನಿರ್ವಹಿಸಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು..
ಈ ಚಿತ್ರದ ನಿರ್ದೇಶಕ ಕವಿ ರಾಜೇಶ್ ಮಾತನಾಡಿ, ನಮ್ಮ ಚಿತ್ರದಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರು ಸೇರಿದಂತೆ ಅನೇಕ ಕಲಾವಿದರುಗಳ ದಂಡೇ ಇದೆ. ಕೇವಲ ಐದು ದಿನಗಳಲ್ಲಿ ಒಂದೇ ಕಲ್ಯಾಣ ಮಂಟಪದಲ್ಲಿ ಚಿತ್ರೀಕರಣಗೊಂಡ ಸಿನಿಮಾವಿದು ಎಂದು ತಿಳಿಸಿದರು.
ಪಂಕಜ್ ಎಸ್ ನಾರಾಯಣ್, ವಿ. ಮನೋಹರ್, ಶಂಕರ್ ಅಶ್ವಥ್, ಮಿಮಿಕ್ರಿ ಗೋಪಿ, ಗಿರಿಜಾ ಲೋಕೇಶ್, ಮೈಸೂರು ರಮಾನಂದ್, ದತ್ತಾತ್ರೇಯ ಕುರುಹಟ್ಟಿ, ಸುನೇತ್ರ ಪಂಡಿತ್, ಹನುಮಂತೇ ಗೌಡ, ಪಾಪ ಪಾಂಡು ಚಿದಾನಂದ್, ನಾಗೇಂದ್ರ ಶಾ, ಸಸ್ಯ, ವಿಜಯ ಭಾಸ್ಕರ್, ನಿಶ್ಚಿತ ಶೆಟ್ಟಿ, ರಜನಿ, ತನುಜಾ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ.