ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಪ್ರಸಿದ್ಧ ಟಾಕ್ ಶೋ 'ಕಾಫಿ ವಿತ್ ಕರಣ್'. ಸೀಸನ್ 8ರ ಮೊದಲ ಅತಿಥಿಗಳಾಗಿ ತಾರಾ ದಂಪತಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಆಗಮಿಸಿದ್ದರು. ಈ ಶೋನಲ್ಲಿ ತಮ್ಮಿಬ್ಬರ ಪ್ರೇಮಕಥೆ ಯಾವಾಗ, ಎಲ್ಲಿಂದ ಶುರುವಾಯಿತು ಎಂಬುದನ್ನು ಹಂಚಿಕೊಂಡಿದ್ದರು. ಆದರೆ, ದೀಪಿಕಾ ಪಡುಕೋಣೆ ಮದುವೆಗೂ ಹಿಂದಿನ ಸಂಬಂಧಗಳ ಬಗ್ಗೆ ಮಾತನಾಡಿದ್ದರು. ಈ ವಿಚಾರಗಳು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ದೀಪಿಕಾ ಪಡುಕೋಣೆ ಟ್ರೋಲ್ ಆಗುತ್ತಿದ್ದಾರೆ. ರಣ್ವೀರ್ ಸಿಂಗ್ ಜೊತೆಗಿನ ವಿವಾಹಕ್ಕೂ ಮುಂಚಿನ ಸಂಬಂಧಗಳ ಬಗ್ಗೆ ಮಾತನಾಡಿರುವುದು ಅವರ ಮೇಲೆ ಕೆಟ್ಟ ಅಭಿಪ್ರಾಯ ಮೂಡಲು ಕಾರಣವಾಗಿದೆ. ಮತ್ತೊಂದೆಡೆ, ನೆಟ್ಟಿಗರು ರಣ್ವೀರ್ ಸಿಂಗ್ ಅವರನ್ನು ಮೋಸಹೋದ ವ್ಯಕ್ತಿ ಎಂದು ಬಿಂಬಿಸುತ್ತಿದ್ದಾರೆ. ಸದ್ಯ ಕಾಫಿ ವಿತ್ ಕರಣ್ ಸಾಮಾಜಿಕ ಜಾಲತಾಣಗಳಲ್ಲಿ ‘ಕಲೇಶ್ ವಿತ್ ಕರಣ್’ ಎಂಬ ಹ್ಯಾಷ್ಟ್ಯಾಗ್ನಲ್ಲಿ ವೈರಲ್ ಆಗುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೆಟ್ 'ದೀಪ್ವೀರ್' ಜೋಡಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ.
ಇಂದು ಇನ್ಸ್ಟಾಗ್ರಾಮ್ನಲ್ಲಿ ದೀಪಿಕಾ ಮತ್ತು ರಣ್ವೀರ್ ದಂಪತಿಯ ಫೋಟೋವನ್ನು ಹಂಚಿಕೊಂಡಿರುವ ಸುಪ್ರಿಯಾ ಅವರನ್ನು ಟ್ರೋಲ್ ಮಾಡುವವರ ವಿರುದ್ಧ ಗರಂ ಆಗಿದ್ದಾರೆ. "ನಾವು ಏನಾಗಿದ್ದೇವೆ? ದಂಪತಿ ಟಾಕ್ ಶೋನಲ್ಲಿ ಒಟ್ಟಿಗೆ ಕುಳಿತು ತಮ್ಮ ಸಂಬಂಧ, ಮದುವೆ ಮತ್ತು ಪ್ರಣಯದ ಬಗ್ಗೆ ಮಾತನಾಡುತ್ತಾರೆ. ಸೂಪರ್ ಸಾಧಕಿಯಾಗಿರುವ ಮಹಿಳೆಯೊಬ್ಬರು ಮಾನಸಿಕವಾಗಿ ನೊಂದಿದ್ದ ಸಮಯದಲ್ಲಿ ಅದರಿಂದ ಹೊರಬರಲು ಪಟ್ಟ ಕಷ್ಟದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಆಕೆಯೊಂದಿಗೆ ಗೆಳೆಯನಾಗಿ ಹೇಗೆ ಜೊತೆಯಾಗಿ ನಿಂತಿದ್ದೆ ಎಂಬುದನ್ನು ರಣ್ವೀರ್ ಹೇಳಿಕೊಂಡಿದ್ದಾರೆ" ಎಂದಿದ್ದಾರೆ.