ಕಾನ್ಪುರ (ಉತ್ತರ ಪ್ರದೇಶ):ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ಮತ್ತು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ನಾವು ಆಡುವ ಮಾತುಗಳು, ವಿಚಾರಗಳು ಪ್ರಚೋದನಾಕಾರಿಯಾಗಿದ್ದಲ್ಲಿ ಅದು ಅಪರಾಧವಾಗುತ್ತದೆ. ಆ ಹೇಳಿಕೆಗೆ ಸೂಕ್ತ ದಾಖಲೆ ಮತ್ತು ಹಿನ್ನೆಲೆ ಇರುವುದು ಅಗತ್ಯವಾಗಿದೆ. ಸಮಾಜದಲ್ಲಿ ಅಶಾಂತಿಗೆ ಕಾರಣ ಆಗುವ ಯಾವುದೇ ವಿಚಾರ ಹಂಚಿಕೊಂಡರೆ ಅದು ಕಾನೂನಾತ್ಮಕವಾಗಿ ಅಪರಾಧವಾಗಿದೆ.
ಉತ್ತರ ಪ್ರದೇಶದ 'ಯುಪಿ ಮೇ ಕಾ ಬಾ' ಖ್ಯಾತಿಯ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರಿಗೆ ಯೂಟ್ಯೂಬ್ ವಿಡಿಯೋದಲ್ಲಿ ಸಾರ್ವಜನಿಕರ ಮಧ್ಯೆ ದ್ವೇಷ ಬೆಳೆಸುವ ಹೇಳಿಕೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತ ಪೊಲೀಸರು ನೋಟಿಸ್ ನೀಡಿದ್ದಾರೆ. ಮಂಗಳವಾರ ರಾತ್ರಿ ನೇಹಾ ಸಿಂಗ್ ಅವರ ನಿವಾಸಕ್ಕೆ ಪೊಲೀಸರು ತೆರಳಿ ನೋಟಿಸ್ ನೀಡಿದ್ದಾರೆ. ನೇಹಾ ಸಿಂಗ್ ಅವರ ಟ್ವಿಟ್ಟರ್ ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ 'ಯುಪಿ ಮೇ ಕಾ ಬಾ - ಸೀಸನ್ 2' ವಿಡಿಯೋಗೆ ಸಂಬಂಧಿಸಿದಂತೆ ಎಚ್ಚರಿಕೆ ಪತ್ರ ನೀಡಲಾಗಿದೆ.
ಪೊಲೀಸರು ನೀಡಿರುವ ಎಚ್ಚರಿಕೆ ಪತ್ರ ಅಪರಾಧ ಪ್ರಕ್ರಿಯೆ ಸಂಹಿತೆಯ (CrPC) ಸೆಕ್ಷನ್ 160 ಅಡಿಯಲ್ಲಿದೆ. ನೋಟಿಸ್‌ನಲ್ಲಿ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಯುಪಿ ಮೇ ಕಾ ಬಾ - ಸೀಸನ್ 2 ವಿಡಿಯೋದ ವಿಚಾರವಾಗಿ ವಿವರಗಳನ್ನು ಕೇಳಿದ್ದಾರೆ. ಅದರಲ್ಲಿ ಸುಮಾರು ಏಳು ಪ್ರಶ್ನೆಗಳನ್ನು ಪೊಲೀಸರು ನೇಹಾ ಅವರ ಮುಂದಿಟ್ಟಿದ್ದಾರೆ.
ನೋಟಿಸ್‌ನಲ್ಲಿ ಕೇಳಲಾದ ವಿವರಗಳು ಇಂತಿದೆ:ನೀವು ಡಿಜಿಟಲ್ ಮಾಧ್ಯಮದ ಮೂಲಕ ಯುಪಿ ಮೇ ಕಾ ಬಾ - ಸೀಸನ್ 2 ಪ್ರಸಾರ ಮಾಡಿದ್ದೀರಿ. ಅದು ನಿಮ್ಮ ವೈಯುಕ್ತ ಖಾತೆಯಿಂದ ಪ್ರಸಾರವಾಗಿದೆ. ಈ ಕಾರಣದಿಂದಾಗಿ ಪ್ರಸಾರ ಆಗಿರುವ ವಿಡಿಯೋದಲ್ಲಿರುವ ಅಂಶಗಳ ಬಗ್ಗೆ ಸ್ಪಷ್ಟನೆ ನೀಡಬೇಕಾಗುತ್ತದೆ ಎಂದು ಸೂಚಿಸಲಾಗಿದೆ.
ವಿಡಿಯೋದಲ್ಲಿ ನೀವು ಇದ್ದೀರೋ, ಇಲ್ಲವೋ?. ಅದರಲ್ಲಿರುವುದು ನೀವೇ ಆಗಿದ್ದರೆ, ಈ ವಿಡಿಯೋವನ್ನು ಯೂಟ್ಯೂಬ್ ಚಾನಲ್ ನೇಹಾ ಸಿಂಗ್ ರಾಥೋಡ್ 'ಯುಪಿ ಮೇ ಕಾ ಬಾ ಸೀಸನ್ 2' ಶೀರ್ಷಿಕೆಯೊಂದಿಗೆ ಮತ್ತು @nehafolksinger ಟ್ವಿಟರ್ ಖಾತೆಯಲ್ಲಿ ನಿಮ್ಮ ಸ್ವಂತ ಇಮೇಲ್ ಐಡಿಯೊಂದಿಗೆ ಅಪ್‌ಲೋಡ್ ಮಾಡಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ದಯವಿಟ್ಟು ಸ್ಪಷ್ಟಪಡಿಸಿ.
ನೇಹಾ ಸಿಂಗ್ ರಾಥೋರ್ ಚಾನಲ್ ಮತ್ತು ಟ್ವಿಟರ್ ಖಾತೆ @nehafolksinger ನಿಮ್ಮದಾಗಲಿ ಅಥವಾ ಇಲ್ಲದಿರಲಿ. ಹೌದು ಎಂದಾದರೆ, ನೀವು ಅವುಗಳನ್ನು ಬಳಸುತ್ತಿದ್ದೀರಾ ಅಥವಾ ಇಲ್ಲವೇ?. ವಿಡಿಯೋದಲ್ಲಿ ಹಾಡಿನ ಪದಗಳನ್ನು ನೀವೇ ಬರೆದಿದ್ದೀರಾ ಅಥವಾ ಇಲ್ಲವೇ. ಹೇಳಿದ ಹಾಡನ್ನು ನೀವೇ ಬರೆದಿದ್ದರೆ ಮತ್ತು ನೀವು ಅದನ್ನು ಪ್ರಮಾಣೀಕರಿಸುತ್ತೀರಿ ಅಥವಾ ಇಲ್ಲ ಎಂಬುದನ್ನು ತಿಳಿಸಬೇಕು. ಹೇಳಿದ ಹಾಡನ್ನು ಬೇರೆಯವರು ಬರೆದಿದ್ದರೆ, ನೀವು ಲೇಖಕರ ದೃಢೀಕರಣವನ್ನು ಪರಿಶೀಲಿಸಿದ್ದೀರಾ ಅಥವಾ ಇಲ್ಲವೇ. ಹಾಡಿನಿಂದ ಉಂಟಾಗುವ ಅರ್ಥದಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ನಿಮಗೆ ತಿಳಿದಿದೆಯೇ ಅಥವಾ ಇಲ್ಲವೇ? ಎಂದು ನೋಟಿಸ್‌ನಲ್ಲಿ ಪೊಲೀಸರು ಪ್ರಶ್ನಿಸಿದ್ದಾರೆ.
"ಈ ಹಾಡು ಸಮಾಜದಲ್ಲಿ ದ್ವೇಷ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸಿದೆ ಮತ್ತು ಈ ವಿಷಯದ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಲು ನೀವು ಕಾನೂನುಬದ್ಧವಾಗಿ ಬದ್ಧರಾಗಿದ್ದೀರಿ. ಆದ್ದರಿಂದ, ನೋಟಿಸ್ ಸ್ವೀಕರಿಸಿದ ಮೂರು ದಿನಗಳಲ್ಲಿ ನಿಮ್ಮ ಉತ್ತರವನ್ನು ಸಲ್ಲಿಸಬೇಕು. ಒಂದು ವೇಳೆ ನಿಮ್ಮ ಉತ್ತರವು ತೃಪ್ತಿಕರವಾಗಿಲ್ಲದಿದ್ದರೆ, ಐಪಿಸಿ ಮತ್ತು ಸಿಆರ್ಒಇಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುತ್ತದೆ ಮತ್ತು ಕಾನೂನು ತನಿಖೆಯನ್ನು ಕೈಗೊಳ್ಳಲಾಗುತ್ತದೆ" ಎಂದು ಎಚ್ಚರಿಕೆ ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಪಾಕ್ ನೆಲದಲ್ಲೇ ಮುಂಬೈ ದಾಳಿಗೆ ಚಾಟಿ ಬೀಸಿದ ಜಾವೆದ್ ಅಖ್ತರ್: 'ಮನೆಗೆ ನುಗ್ಗಿ ಹೊಡೆದಿದ್ದೀರಾ' ಎಂದ ಕಂಗನಾ