ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಡಾ.ಲೀಲಾವತಿ ವಿಧಿವಶರಾಗಿದ್ದಾರೆ. ಇವರ ನಿಧನ ಇಡೀ ಸ್ಯಾಂಡಲ್ವುಡ್ಗೆ ಆಘಾತ ಉಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಅನೇಕ ರಾಜಕೀಯ ಗಣ್ಯರು, ಸಿನಿಮಾ ತಾರೆಯರು ಸೋಷಿಯಲ್ ಮೀಡಿಯಾದ ಮೂಲಕ ಲೀಲಾವತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಮೋದಿ ಸಂತಾಪ: "ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಿನಿಮಾದ ನೈಜ ಪ್ರತೀಕವಾದ ಅವರು ಹಲವಾರು ಚಲನಚಿತ್ರಗಳಲ್ಲಿ ತಮ್ಮ ಬಹುಮುಖ ನಟನೆಯೊಂದಿಗೆ ಬೆಳ್ಳಿ ಪರದೆಯನ್ನು ಅಲಂಕರಿಸಿದವರು. ಅವರ ವೈವಿಧ್ಯಮಯ ಪಾತ್ರಗಳು ಮತ್ತು ಅದ್ಭುತ ಪ್ರತಿಭೆಯನ್ನು ಸದಾ ಸ್ಮರಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ" ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಸ್ಯಾಂಡಲ್ವುಡ್ ಕಂಬನಿ:ಕನ್ನಡ ಚಿತ್ರರಂಗದ ತಾರೆಯರು ಲೀಲಾವತಿ ಅವರನ್ನು 'ಅಮ್ಮ'ನಂತೆ ಕಾಣುತ್ತಿದ್ದರು. ಇಂದು ಅವರ ನಿಧನಕ್ಕೆ ಇಡೀ ಚಿತ್ರರಂಗವನ್ನೇ ಮೌನವಾಗಿಸಿದೆ. ನಟರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಲೀಲಾವತಿ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡು, ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
"ಲೀಲಾವತಿ ಅಮ್ಮ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" - ನಿರ್ದೇಶಕ ಪ್ರೇಮ್
ಮಾತೃಶ್ರೀ ಲೀಲಾವತಿ ಅಮ್ಮನವರ ಅಂತಿಮ ದರ್ಶನ ಪಡೆದೆ. ಅವರ ಮಗ ವಿನೋದರಾಜ್ ಚಿತ್ರದಲ್ಲಿ ಖಳನಟ ಪಾತ್ರಮಾಡಿದಾಗ ಜಗ್ಗೇಶ ನೀನು ಬೇಗ ನಾಯಕ ನಟನಾಗು ಎಂದು ಹರಸಿದ ಅವರ ಅಮೃತವಾಕ್ಯ ನೆನೆಪಾಯಿತು. ನಮ್ಮ ಹಿರಿಯರು ನಮ್ಮ ಆಸ್ತಿ. ಓಂ ಶಾಂತಿ- ನವರಸ ನಾಯಕ ಜಗ್ಗೇಶ್
ನಮ್ಮ ಕರುನಾಡಿನ ಹೆಸರಾಂತ ಕಲಾವಿದೆ ಲೀಲಾವತಿ ಅಮ್ಮನವರು ಇಂದು ಸಾವನ್ನಪ್ಪಿರುವುದು ಇಡೀ ರಾಜ್ಯಕ್ಕೆ ಒಂದು ದುಃಖಕರ ಸಂಗತಿ. ಈ ಮಹಾನ್ ಚೇತನಕ್ಕೆ ಶಾಂತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ವಿನೋದ್ ರಾಜ್ ರವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ. ಓಂ ಶಾಂತಿ - ನಟ ದರ್ಶನ್
ಮೇರು ನಟಿಯರಲ್ಲಿ ಮೊದಲಿಗರಾಗಿ ಹೊರಹೊಮ್ಮಿದ ಲೀಲಾವತಿ ಅಮ್ಮನವರು ನಮ್ಮನ್ನೆಲ್ಲ ಅಗಲಿರುವ ವಿಷಯ ತಿಳಿದು ಬಹಳ ದುಃಖವಾಯಿತು. ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅತ್ಯಮೂಲ್ಯವಾದದ್ದು ಅಮ್ಮ, ನಿಮ್ಮ ಈ ಅಗಲಿಕೆಯ ದುಃಖ ಭರಿಸುವ ಶಕ್ತಿ ವಿನೋದ್ ಅಣ್ಣನಿಗೂ ಮತ್ತು ಇಡೀ ಕರ್ನಾಟಕದ ಜನತೆಗೂ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ - ನಟ ಶರಣ್
ಕನ್ನಡದ ಹೆಸರಾಂತ ಹಿರಿಯ ನಟಿ ಡಾ.ಲೀಲಾವತಿ ಅವರ ನಿಧನದ ಸುದ್ದಿ ತೀವ್ರ ಆಘಾತ ತಂದಿದೆ. ದಕ್ಷಿಣದ ಸಿನಿಮಾ ರಂಗಕ್ಕೆ ಇದು ತುಂಬಲಾರದ ನಷ್ಟ. ಆರನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಲೀಲಾವತಿ ಅವರು ನಾನಾ ಭಾಷೆಗಳಲ್ಲಿ ನಟಿಸುವ ಮೂಲಕ ದಕ್ಷಿಣ ಯಶಸ್ವಿ ನಟಿಯಾಗಿದ್ದರು. ಅವರೊಂದಿಗೆ ನನಗೂ ಕಥಾನಾಯಕ ಸಿನಿಮಾದಲ್ಲಿ ಪಾತ್ರ ಮಾಡಲು ಅವಕಾಶ ಸಿಕ್ಕಿತ್ತು. ಅಗಲಿಕೆ ನೋವನ್ನು ಭರಿಸುವಂತಹ ಶಕ್ತಿಯನ್ನು ಲೀಲಾವತಿ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ - ಸಂಸದೆ, ನಟಿ ಸುಮಲತಾ ಅಂಬರೀಶ್
'ಕನ್ನಡ ಕೋಗಿಲೆ' ಕಾರ್ಯಕ್ರಮದ ಸಂದರ್ಭದಲ್ಲಿ ಲೀಲಾವತಿ ಅಮ್ಮಾವರ ಭೇಟಿ ಎಂದಿಗೂ ಮರೆಯಲಾಗದ ಕ್ಷಣ. ನಾನು ಹಾಡಿದ 'ಅಮ್ಮಾ' ಹಾಡು ಕೇಳಿ ಭಾವುಕರಾಗಿ ಮನದುಂಬಿ ಹಾರೈಸಿದ್ದರು. ತಾಯಿಯ ಆಶೀರ್ವಾದ ಸದಾ ನಮ್ಮ ಮೇಲಿದೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ- ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ
ಇದನ್ನೂ ಓದಿ:ನಟಿಯಾಗಿ, ತಾಯಿಯಾಗಿ, ಪೋಷಕ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ ಅಭಿನೇತ್ರಿ ಲೀಲಾವತಿ