ಕೊಚ್ಚಿ(ಕೇರಳ): ಇಲ್ಲಿನ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ಜನವರಿ 17 ರಂದು ನಡೆಯಲಿರುವ ಬಿಜೆಪಿ ಮುಖಂಡ ಹಾಗೂ ನಟ ಸುರೇಶ್ ಗೋಪಿ ಅವರ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿಯವರ ಭೇಟಿ ಹಿನ್ನೆಲೆ ಶ್ರೀ ಕೃಷ್ಣ ದೇವಾಲಯದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಸುರೇಶ್ ಗೋಪಿ ಅವರು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದರು, ಅವರ ಅಧಿಕಾರಾವಧಿ ಏಪ್ರಿಲ್ 2022ರಲ್ಲಿ ಕೊನೆಗೊಂಡಿದೆ. ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ತ್ರಿಶೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ತ್ರಿಶೂರ್ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ನಟ ಮೋಹನ್ ಲಾಲ್ ದಂಪತಿ, ನಟ ಜಯರಾಮ್ ದಂಪತಿ, ದಿಲೀಪ್ ದಂಪತಿ ಈ ವಿವಾಹದಲ್ಲಿ ಭಾಗವಹಿಸಲಿದ್ದಾರೆ. ಸೂಪರ್ ಸ್ಟಾರ್ ಮಮ್ಮುಟ್ಟಿ ಕೂಡ ಮದುವೆಗೆ ಹಾಜರಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ:ಜ.19 ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ನಮೋ ರೋಡ್ ಶೋಗೆ ಬಿಜೆಪಿ ಚಿಂತನೆ
ಪತ್ರಕರ್ತೆಯೊಂದಿಗೆ ಅನುಚಿತ ವರ್ತನೆ, ಕ್ಷಮೆಯಾಚಿಸಿದ್ದ ಬಿಜೆಪಿ ಮುಖಂಡ ಸುರೇಶ್ ಗೋಪಿ:ಕಳೆದ ಅಕ್ಟೋಬರ್ನಲ್ಲಿ ಕೋಯಿಕ್ಕೋಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಬಿಜೆಪಿ ಮುಖಂಡ ಹಾಗೂ ನಟ ಸುರೇಶ್ ಗೋಪಿ ವಿರುದ್ಧ ಮಹಿಳಾ ಪತ್ರಕರ್ತೆ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದರು. ದಿನಾಂಕ 27.10.23 ಕೋಯಿಕ್ಕೋಡ್‌ನಲ್ಲಿ ಮಾಧ್ಯಮಗೋಷ್ಠಿ ಇತ್ತು. ಆ ವೇಳೆ, ಸುರೇಶ್ ಗೋಪಿ ಅವರು ಮಹಿಳಾ ಪತ್ರಕರ್ತೆ ವಿರುದ್ಧ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಪ್ರಶ್ನೆ ಕೇಳಿದ ಪತ್ರಕರ್ತೆಯ ಭುಜದ ಮೇಲೆ ಸುರೇಶ್ ಗೋಪಿ ಕೈ ಹಾಕಿದ್ದರು. ಪತ್ರಕರ್ತೆ ದೂರ ಸರಿದರೂ ಕೂಡ ಸುರೇಶ್ ಗೋಪಿ ತಮ್ಮ ಈ ವರ್ತನೆಯನ್ನು ಮುಂದುವರಿಸಿದ್ದರು. ವಿಡಿಯೋದಲ್ಲಿ ಈ ವರ್ತನೆ ಸ್ಪಷ್ಟವಾಗಿ ಕಂಡಿತ್ತು.
ಫೇಸ್ ಬುಕ್ ಖಾತೆ ಮೂಲಕ ಕ್ಷಮೆಯಾಚನೆ:ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವು, ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನಟ, ರಾಜಕಾರಣಿ ಸುರೇಶ್ ಗೋಪಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿತ್ತು. ಈ ಬೆಳವಣಿಗೆಗಳ ಬಳಿಕ ಸುರೇಶ್ ಗೋಪಿ ತಮ್ಮ ಫೇಸ್ ಬುಕ್ ಖಾತೆ ಮೂಲಕ ಕ್ಷಮೆಯಾಚಿಸಿದ್ದರು. ಪತ್ರಕರ್ತರನ್ನು ಪ್ರೀತಿಯಿಂದ ನಡೆಸಿಕೊಂಡಿದ್ದು, ಮಗುವಿಗೆ ಯಾವುದೇ ರೀತಿಯ ನೋವಾಗಿದ್ದರೆ ಅಥವಾ ಮಾನಸಿಕ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಸುರೇಶ್ ಗೋಪಿ ತಮ್ಮ ಅಧಿಕೃತ ಫೇಸ್ ಬುಕ್ನಲ್ಲಿ ಬರೆದುಕೊಂಡಿದ್ದರು.