ಕರ್ನಾಟಕ

karnataka

ETV Bharat / entertainment

ರಣ್‌ ಉತ್ಸವ, ಏಕತೆಯ ಪ್ರತಿಮೆಗೆ ಭೇಟಿ ನೀಡುವಂತೆ ಅಮಿತಾಭ್​ ಬಚ್ಚನ್‌ಗೆ ಪ್ರಧಾನಿ ಮೋದಿ ಒತ್ತಾಯ​ - ಈಟಿವಿ ಭಾರತ ಕನ್ನಡ

ಕಛ್​​​ನಲ್ಲಿ ನಡೆಯುವ ರನ್ನ್​​ ಉತ್ಸವಕ್ಕೆ ನಟ ಅಮಿತಾಭ್​ ಬಚ್ಚನ್​ ಅವರನ್ನು ಆಮಂತ್ರಿಸಿರುವ ಪ್ರಧಾನಿ ಮೋದಿ, ಏಕತೆಯ ಪ್ರತಿಮೆಗೆ ನಿಮ್ಮ ಭೇಟಿಯೂ ಬಾಕಿ ಇದೆ ಎಂದು ನೆನಪಿಸಿದ್ದಾರೆ.

PM Modi reminds Amitabh Bhachchan of his pending visit to Statue of Unity, urges actor to visit Kutch
ಕಛ್​ಗೆ ಭೇಟಿ ನೀಡುವಂತೆ ನಟ ಅಮಿತಾಭ್​ ಬಚ್ಚನ್ ಒತ್ತಾಯಿಸಿದ ಪ್ರಧಾನಿ ಮೋದಿ​

By ETV Bharat Karnataka Team

Published : Oct 15, 2023, 9:50 PM IST

ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಅವರು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಾರ್ವತಿ ಕುಂಡ, ಜಾಗೇಶ್ವರ ದೇವಾಲಯಗಳಿಗೆ ಭೇಟಿ ನೀಡಿರುವ ಕುರಿತು ಪೋಸ್ಟ್​ವೊಂದನ್ನು ಶೇರ್​ ಮಾಡಿದ್ದರು. ಇದನ್ನು ಮರುಹಂಚಿಡಿರುವ ಪ್ರಧಾನಿ, ನಟನನ್ನು ಕಛ್​​​ನಲ್ಲಿ ನಡೆಯುವ ರಣ್​​ ಉತ್ಸವಕ್ಕೆ ಆಮಂತ್ರಿಸುವುದರ ಜೊತೆಗೆ ಏಕತೆಯ ಪ್ರತಿಮೆಗೆ ನಿಮ್ಮ ಭೇಟಿಯೂ ಬಾಕಿ ಇದೆ ಎಂದು ನೆನಪಿಸಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಪಾರ್ವತಿ ಕುಂಡ ಮತ್ತು ಜಾಗೇಶ್ವರ ದೇವಾಲಯಗಳಿಗೆ ತೆರಳಿದ್ದರು. ಅಲ್ಲಿನ ವಿಶೇಷತೆಯನ್ನು ಎಕ್ಸ್​ ಮೂಲಕ ತಿಳಿಸಿದ್ದ ಪ್ರಧಾನಿ, "ಉತ್ತರಾಖಂಡಕ್ಕೆ ತೆರಳಿದಾಗ ನೀವು ಪಾರ್ವತಿ ಕುಂಡ ಮತ್ತು ಜಾಗೇಶ್ವರ ದೇವಾಲಯಗಳಿಗೆ ಭೇಟಿ ನೀಡಲೇಬೇಕು. ಇಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ದೈವತ್ವಕ್ಕಾಗಿ ಈ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲೇಬೇಕು" ಎಂದು ಹೇಳಿದ್ದರು. ಜೊತೆಗೆ ಅಲ್ಲಿ ತೆಗೆಸಿಕೊಂಡ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು.

ಇದರಲ್ಲಿ ಮೋದಿಯವರ ಒಂದು ಫೋಟೋವನ್ನು ಹಂಚಿಕೊಂಡಿರುವ ಅಮಿತಾಭ್​ ಬಚ್ಚನ್​, "ಧಾರ್ಮಿಕತೆ, ರಹಸ್ಯ, ಕೈಲಾಸ ಪರ್ವತದ ದೈವತ್ವ.. ಇದು ನನಗೆ ಬಹಳ ಸಮಯದಿಂದ ಕುತೂಹಲ ಕೆರಳಿಸಿದೆ. ಆದರೆ, ದುರಂತವೆಂದರೆ ನಾನು ಅಲ್ಲಿಗೆ ವೈಯಕ್ತಿಕವಾಗಿ ತೆರಳಲು ಸಾಧ್ಯವಾಗುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.

ಇದೇ ಪೋಸ್ಟ್​ ಅನ್ನು ಮರುಹಂಚಿಕೊಂಡಿರುವ ಪ್ರಧಾನಿ ಮೋದಿ, "ಪಾರ್ವತಿ ಕುಂಡ ಮತ್ತು ಜಾಗೇಶ್ವರ ದೇವಸ್ಥಾನಕ್ಕೆ ನನ್ನ ಭೇಟಿ ನಿಜಕ್ಕೂ ಮಂತ್ರಮುಗ್ಧಗೊಳಿಸಿತು. ಮುಂಬರುವ ವಾರಗಳಲ್ಲಿ ರಣ್​ ಉತ್ಸವವು ಪ್ರಾರಂಭವಾಗುತ್ತಿದೆ. ಕಛ್​​ಗೆ ಭೇಟಿ ನೀಡುವಂತೆ ನಿಮ್ಮನ್ನು ನಾನು ಆಮಂತ್ರಿಸುತ್ತಿದ್ದೇನೆ. ಏಕತೆಯ ಪ್ರತಿಮೆಗೆ ನಿಮ್ಮ ಭೇಟಿಯೂ ಬಾಕಿ ಇದೆ" ಎಂದು ಹೇಳಿದ್ದಾರೆ.

ಪಿಥೋರಗಢದಲ್ಲಿರುವ ಪಾರ್ವತಿ ಕುಂಡ ಭಾರತದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ಸುಮಾರು 5,338 ಅಡಿ ಎತ್ತರದಲ್ಲಿರುವ ಹಿಂದೂ ಯಾತ್ರಾಸ್ಥಳವು ಪ್ರತಿವರ್ಷ ಭಕ್ತರನ್ನು ಸೆಳೆಯುತ್ತದೆ. ಈ ತಾಣವು ಮಹಾನ್​ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಶಿವ ಮತ್ತು ಪಾರ್ವತಿ ದೇವಿಯು ಧ್ಯಾನ ಮಾಡಿದ ಸ್ಥಳವೆಂದು ನಂಬಲಾಗಿದೆ. ದೈವಿಕ ದಂಪತಿಯ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಇನ್ನೂ ಸುಮಾರು 6,200 ಅಡಿ ಎತ್ತರದಲ್ಲಿರುವ ಜಾಗೇಶ್ವರ ಧಾಮವು ಸರಿಸುಮಾರು 224 ಕಲ್ಲಿನ ದೇವಾಲಯಗಳನ್ನು ಒಳಗೊಂಡಿದೆ.

ಬಿಗ್​ ಬಿ ಮುಂಬರುವ ಸಿನಿಮಾಗಳು..:81ರ ಹರೆಯದಲ್ಲೂ ಬಿಗ್​ ಬಿ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಆ್ಯಕ್ಷನ್​​ ಥ್ರಿಲ್ಲರ್ ಗಣಪತ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ವಿಕಾಸ್ ಬಹ್ಲ್ ನಿರ್ದೇಶನದ ಈ ಚಿತ್ರದಲ್ಲಿ ಟೈಗರ್ ಶ್ರಾಫ್ ಮತ್ತು ಕೃತಿ ಸನೋನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದೇ ಅಕ್ಟೋಬರ್ 20ರಂದು ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಅಲ್ಲದೇ ಇಂಡಿಯನ್​ ಸಿನಿಮಾ ಹಿಸ್ಟರಿಯಲ್ಲೇ ಬಿಗ್​ ಬಜೆಟ್​​ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲ್ಕಿ 2898 ಎಡಿ ಸೇರಿದಂತೆ ಮೂರ್ನಾಲ್ಕು ಸಿನಿಮಾಗಳು ಅಮಿತಾಭ್​ ಬಚ್ಚನ್​ ಕೈಯಲ್ಲಿದೆ.

ಇದನ್ನೂ ಓದಿ:'ಕಲ್ಕಿ 2898 ಎಡಿ' ಬಿಗ್​ ಬಿ ಫಸ್ಟ್ ಲುಕ್​: ಚಿತ್ರ ನಿರ್ಮಾಪಕರಿಗೆ ಅಮಿತಾಭ್​ ಬಚ್ಚನ್​​​ ಕೃತಜ್ಞತೆ

ABOUT THE AUTHOR

...view details