ನವದೆಹಲಿ: ಚಿತ್ರ ನಿರ್ಮಾಪಕಿ, ನಟಿ ಲೀನಾ ಮಣಿಮೇಕಲೈ ಅವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್ಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರೇ ನಿರ್ದೇಶಿಸಿದ ಕಾಳಿ ಎಂಬ ಸಾಕ್ಷ್ಯಚಿತ್ರ ಪೋಸ್ಟರ್ ಹಂಚಿಕೊಂಡಿರುವ ಲೀನಾ, ಕಾಳಿ ದೇವಿಯ ಫೋಟೋವನ್ನು ವಿಚಿತ್ರವಾಗಿ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪೋಸ್ಟರ್ ವಿವಾದ ಹುಟ್ಟುಹಾಕಿದ್ದು ಅವರ ವಿರುದ್ಧ ವಿವಿಧಡೆ ದೂರು ಕೂಡಾ ದಾಖಲಾಗಿದೆ.
ಫೋಟೋದಲ್ಲಿ ಏನಿದೆ?ಕಾಳಿ ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿರುವ ತಾರೆ ಕೈಯಲ್ಲಿ ಸಿಗರೇಟು ಹಿಡಿದುಕೊಂಡಿರುವ ಫೋಟೋ ಇದಾಗಿದೆ. ಸಮುದಾಯವೊಂದರ ಧ್ವಜ ಕೂಡ ಫೋಟೋದಲ್ಲಿ ಕಾಣಿಸಿಕೊಂಡಿದೆ. ಸದ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಚಿತ್ರ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟಿಜನ್ಗಳು ತಾರೆಗೆ ಸಖತ್ ಪಾಠ ಮಾಡಲಾಂಭಿಸಿದ್ದಾರೆ.
ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್: ವಿವಾದಿತ ಪೋಸ್ಟರ್ ಅನ್ನು ತತಕ್ಷಣ ಅಳಿಸಿ ಹಾಕಬೇಕು. ಅಲ್ಲದೇ ಹಿಂದೂ ಭಾವನೆಗಳ ಜೊತೆ ಆಟವಾಡುವ ಇಂತಹ ನಟಿಯರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಟ್ವೀಟ್ ಮಾಡಲಾಗುತ್ತಿದೆ. ಟ್ವಿಟರ್‌ನಲ್ಲಿ '#ArrestLeenaManimekal' ಎಂಬ ಹ್ಯಾಶ್‌ಟ್ಯಾಗ್ ಇದೀಗ ಟ್ರೆಂಡಿಂಗ್ ಆಗಿದೆ.
"ಲೀನಾ ಮಣಿಮೇಕಲೈ ಹಿಂದೂ ದೇವರು ಸಿಗರೇಟ್ ಸೇದುವಂತೆ ಫೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಕಾಳಿಯನ್ನು ಅವಮಾನಿದ್ದಾರೆ" ಎಂದು ಟ್ವಿಟ್ಟರ್ನಲ್ಲಿ ವ್ಯಕ್ತಿಯೊಬ್ಬರು ಬರೆದಿದ್ದಾರೆ. "ಲೀನಾ ಅವರ ಬಂಧನಕ್ಕೆ ನಾನು ಒತ್ತಾಯಿಸುವೆ. ಕಾಳಿಯನ್ನು ಅಸಹ್ಯವಾಗಿ ತೋರಿಸಿದ್ದನ್ನು ಹಿಂದೂಗಳಾದ ನಾವು ಸಹಿಸುವುದಿಲ್ಲ ಎಂದು ಮಗದೊಬ್ಬ ಟ್ವಿಟರ್ ಬಳಕೆದಾರರು ಬರೆದಿದ್ದಾರೆ.
"ಹಿಂದೂ ದೇವತೆ ಸಿಗರೇಟ್ ಸೇದುವಂತೆ ಅಪಹಾಸ್ಯ ಮಾಡಿ ಚಿತ್ರಿಸಿರುವ ಹಿಂದೂ ವಿರೋಧಿ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಬಂಧನಕ್ಕೆ ನಾನು ಧ್ವನಿ ಎತ್ತುತ್ತಿದ್ದೇನೆ. ಇದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮತ್ತೊಬ್ಬರು #ArrestLeenaManimekalai ಟ್ವೀಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ಕಾಮೆಂಟ್ಗಳಿಗೆ ನಿರ್ಬಂಧ:ತಮ್ಮ ಪೋಸ್ಟರ್‌ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕಾಮೆಂಟ್ಗಳು ಬರದಂತೆ ನಿರ್ಬಂಧಿಸಿದ್ದಾರೆ. ಆದರೂ ಜಾಲತಾಣದಲ್ಲಿ ಅವರ ಬಗ್ಗೆ ಟೀಕೆ ಮತ್ತು ಆಕ್ರೋಶದ ಮಾತುಗಳು ಹರಿದಾಡುತ್ತಲೇ ಇವೆ.
ದೆಹಲಿಯಲ್ಲಿ ದೂರು ದಾಖಲು:ದೆಹಲಿ ಮೂಲದ ವಕೀಲರೊಬ್ಬರು ವಿವಾದಾತ್ಮಕ ಪೋಸ್ಟರ್ ಕುರಿತು ಲೀನಾ ವಿರುದ್ಧ ವಿವಿಧ ಪ್ರಕರಣಗಳಡಿ ದೂರು ಸಹ ದಾಖಲಿಸಿದ್ದಾರೆ. ಈ ವಿವಾದಾತ್ಮಕ ಪೋಸ್ಟರ್ ಅನ್ನು ಜುಲೈ 2 ರಂದು ಮಣಿಮೇಕಲೈ ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಕಾಳಿ ದೇವಿಯು ಸಿಗರೇಟ್ ಸೇದುತ್ತಿರುವಂತೆ ತೋರಿಸಲಾಗಿದೆ. ನಿರ್ದಿಷ್ಟ ಸಮುದಾಯದ ಧಾರ್ಮಿಕ ನಂಬಿಕೆಗಳನ್ನು ಅವಹೇಳನ ಮಾಡುವಂತಹ ಫೋಸ್ಟ್ ಇದಾಗಿದೆ. ಆಕ್ಷೇಪಾರ್ಹ ವಿಡಿಯೊ ಕ್ಲಿಪ್ ಮತ್ತು ಫೋಟೋವನ್ನು ತಕ್ಷಣವೇ ಜಾಲತಾಣದಿಂದ ತೆಗೆದುಹಾಕಬೇಕು ಎಂದು ವಕೀಲರು ಹೇಳಿದ್ದಾರೆ.
ದ್ವೇಷಕ್ಕಿಂತ ಪ್ರೀತಿ ಆಯ್ಕೆ ಎಂದ ಲೀನಾ:ತಮ್ಮ ವಿರುದ್ಧ ಟೀಕೆಗಳು ಹೆಚ್ಚಾಗಿ ಕೇಳಿ ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಅವರು, ದ್ವೇಷಕ್ಕಿಂತ ಪ್ರೀತಿ ಆಯ್ಕೆ ಮಾಡಲು ಜನರನ್ನು ಕೇಳಿಕೊಂಡಿದ್ದಾರೆ. ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯವು ಕೆನಡಾದ ವಿವಿಧ ಸಂಸ್ಕೃತಿಯ ಕುರಿತು ಚಲನಚಿತ್ರಗಳನ್ನು ನಿರ್ಮಿಸುವ ಶಿಬಿರದಲ್ಲಿ ಭಾಗವಹಿಸಲು ಕೆನಡಾದಾದ್ಯಂತದ ಕೆಲವು ಅತ್ಯುತ್ತಮ ಸಿನಿಮಾ ವಿದ್ಯಾರ್ಥಿಗಳನ್ನು ಆಹ್ವಾನಿಸಿತ್ತು. ಆ ಶಿಬಿರದಲ್ಲಿ ನಾನು ಭಾಗವಹಿಸಿ ಕೊಡುಗೆ ನೀಡಿದ ಚಿತ್ರವಿದು. ಕಳೆದುಕೊಳ್ಳಲು ನನ್ನ ಬಳಿ ಏನೂ ಇಲ್ಲ. ನಾನು ಅಲ್ಲಿಯವರೆಗೆ ಯಾವುದಕ್ಕೂ ಹೆದರದೆ ಮಾತನಾಡುವ ಧ್ವನಿಯೊಂದಿಗೆ ಬಂದಿದ್ದೇನೆ. ಮುಂದೆಯೂ ಹೀಗೆ ಇರಲು ಬಯಸುತ್ತೇನೆ. ಈ ಸಾಕ್ಷ್ಯ ಚಿತ್ರದಲ್ಲಿ ನಾನು ನಟಿಸಿದ್ದೇನೆ, ನಿರ್ದೇಶನ ಮಾಡಿದ್ದೇನೆ ಮತ್ತು ನಿರ್ಮಿಸಿದ್ದೇನೆ ಎಂದು ಅವರು ಪ್ರತಿ ಟ್ವೀಟ್ ಮಾಡಿದ್ದಾರೆ.
ಈ ಚಿತ್ರವು ಒಂದು ಸಂಜೆ ಕಾಳಿ ಕಾಣಿಸಿಕೊಂಡಾಗ ಮತ್ತು ಟೊರೊಂಟೊದ ಬೀದಿಗಳಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆಯಲಾಗಿದೆ. ನೀವು ಚಿತ್ರವನ್ನು ನೋಡಿದರೆ, ಲೀನಾಳನ್ನು ಬಂಧಿಸಿ ಎಂಬ ಹ್ಯಾಶ್‌ಟ್ಯಾಗ್ ಅನ್ನು ಪೋಸ್ಟ್ ಮಾಡುವುದಿಲ್ಲ. ಅದಲು ಬದಲು ಲವ್ ಯೂ ಲೀನಾ ಮಣಿಮೇಕಲೈ ಎಂಬ ಹ್ಯಾಶ್‌ಟ್ಯಾಗ್ ಅನ್ನು ಪೋಸ್ಟ್ ಮಾಡಲು ಆರಂಭಿಸುತ್ತೀರಿ ಎಂದಿದ್ದಾರೆ.
ಮತ್ತೆ ಟೀಕಾ ಪ್ರಹಾರ:ಉರಿಯುವ ಬೆಂಕಿಗೆ ತುಪ್ಪ ಸುರಿದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದನ್ನು ಕಂಡು ಮತ್ತೆ ಕೆಲವು ನೆಟಿಜನ್ಗಳು ಟೀಕಾ ಪ್ರಹಾರ ನಡೆಸಿದ್ದಾರೆ. ವಿವಾದಿತ ಚಿತ್ರದ ನಿರ್ಮಾಪಕಿಯ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೂ ಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇದನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಒಂದು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕ್ಷಮೆಯಾಚಿಸುವ ಬದಲು ಹಿಂದೂಗಳನ್ನು ಅಪಹಾಸ್ಯ ಮಾಡುವ ಮತ್ತು ಅದನ್ನು ಬೆಂಬಲಿಸುವ ಧೈರ್ಯದ ಮಾತುಗಳನ್ನಾಡಿದ್ದಾರೆ. ಅಲ್ಲದೇ ಪರೋಕ್ಷವಾಗಿ ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ. ಹಿಂದೂಗಳನ್ನು ಅಪಹಾಸ್ಯ ಮಾಡುವುದು ಇಂತವರಿಗೆ ಯಾವುದೇ ಭಯವಿಲ್ಲದಾಗಿದೆ. ಸುಪ್ರೀಂಕೋರ್ಟ್ ನ್ಯಾಯಾಧೀಶರು ಏಕೆ ಅದರ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.