ನವದೆಹಲಿ: ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ 'ಆದಿಪುರುಷ್' ಚಿತ್ರದಲ್ಲಿನ ಕೆಲ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆ ಆಗಿದೆ. ಪೌರಾಣಿಕ ಮಹಾಕಾವ್ಯ ರಾಮಾಯಣದ ಧಾರ್ಮಿಕ ಪಾತ್ರಗಳಾದ ರಾಮ, ಸೀತೆಯ ಮತ್ತು ರಾವಣನ ಪಾತ್ರಗಳನ್ನು ಚಿತ್ರದಲ್ಲಿ ವಿವಾದಾತ್ಮಕ ರೀತಿಯಲ್ಲಿ ತೋರಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅಂತಹ ವಿವರಣೆಯು ಮಹಾ ಋಷಿ ವಾಲ್ಮೀಕಿಯ ರಾಮಾಯಣ ಮತ್ತು ತುಳಸಿದಾಸರ ರಾಮಚರಿತ ಮಾನಸಗಳಲ್ಲಿ ಕಂಡುಬರುವುದಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಈ ಪಿಐಎಲ್ ಸಲ್ಲಿಸಿದ್ದಾರೆ. ಸಿನಿಮಾಟೋಗ್ರಾಫ್ ಆಕ್ಟ್, 1952ರ ಸೆಕ್ಷನ್ 5A ಪ್ರಕಾರ ಓಂ ರಾವುತ್ ನಿರ್ದೇಶಿಸಿದ ಚಲನಚಿತ್ರವು ಸಾರ್ವಜನಿಕ ಪ್ರದರ್ಶನಕ್ಕೆ ಯೋಗ್ಯವಾಗಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಚಿತ್ರದಿಂದ ಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಭಗವಾನ್ ಶ್ರೀರಾಮ, ಸೀತಾಮಾತಾ ಮತ್ತು ಹನುಮಂತನ ವೇಷಭೂಷಣಗಳು ವಿಭಿನ್ನವಾಗಿದೆ. ಅವರನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಚಿತ್ರಿಸಿರುವುದು ಹಿಂದೂಗಳ ಭಾವನೆಗಳನ್ನು ಕೆರಳಿಸಿದೆ ಎಂದು ಆರೋಪಿಸಿದ್ದಾರೆ.
ವಿಷ್ಣು ಗುಪ್ತಾ ಅವರು ಕೇಂದ್ರ ಸರ್ಕಾರ, ಚಲನಚಿತ್ರ ಸೆನ್ಸಾರ್ ಮಂಡಳಿ, ತಮಿಳುನಾಡು ಸರ್ಕಾರ, ಚಲನಚಿತ್ರ ನಿರ್ದೇಶಕ ಓಂ ರಾವುತ್ ಮತ್ತು ಟಿ ಸೀರಿಸ್ ಸಂಸ್ಥೆಯನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಿದ್ದಾರೆ. ಇದರೊಂದಿಗೆ, ಚಿತ್ರದ ವಿವಾದಾತ್ಮಕ ದೃಶ್ಯವನ್ನು ತೆಗೆದುಹಾಕದೇ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ನೀಡಬಾರದು ಅಥವಾ ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಪ್ರದರ್ಶಿಸಬಾರದು ಎಂದು ಒತ್ತಾಯಿಸಿದ್ದಾರೆ.