ಅಮರಾವತಿ (ಆಂಧ್ರಪ್ರದೇಶ): ಟಾಲಿವುಡ್ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ಗುರುವಾರ ಹೇಳಿದ್ದಾರೆ. ಕರ್ನಾಟಕದ ರಾಜಕೀಯವನ್ನು ಉಲ್ಲೇಖಿಸಿರುವ ಅವರು, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕೇವಲ 30 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮುಖ್ಯಮಂತ್ರಿಯಾದರು. 2019ರಲ್ಲಿ ಜನರು ತನಗೆ 40 ಸ್ಥಾನಗಳನ್ನು ನೀಡಿದ್ದರೆ ನಾನೂ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದೆ ಎಂದು ಜನಸೇನಾ ಪಕ್ಷದ (ಜೆಎಸ್‌ಪಿ) ನಾಯಕ ತಿಳಿಸಿದರು.
ಇಲ್ಲಿನ ಮಂಗಳಗಿರಿಯ ಜೆಎಸ್‌ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ನಾನು ಮುಖ್ಯಮಂತ್ರಿಯಾಗಲು ಬಯಸಿದರೆ, ಅದನ್ನು ಹೇಳಲು ಎಂದಿಗೂ ಹಿಂಜರಿಯುವುದಿಲ್ಲ. ಹಾಗಂತ ನಾನೆಂದಿಗೂ ತೆಲುಗು ದೇಶಂ ಪಕ್ಷ (ಟಿಡಿಪಿ) ಅಥವಾ ಭಾರತೀಯ ಜನತಾ ಪಕ್ಷ (ಬಿಜೆಪಿ) ಅವರಲ್ಲಿ ನನ್ನನ್ನು ಮುಖ್ಯಮಂತ್ರಿ ಮಾಡುವಂತೆ ಕೇಳುವುದಿಲ್ಲ ಎಂದರು. ನಾನು ನನ್ನ ಶಕ್ತಿಯನ್ನು ತೋರಿಸುತ್ತೇನೆ ಮತ್ತು ಅಧಿಕಾರವನ್ನು ಕೇಳುತ್ತೇನೆ ಎಂದು ಹೇಳಿದ್ದಾರೆ.
2019ರ ಚುನಾವಣೆಯಲ್ಲಿ ಎಡ ಪಕ್ಷಗಳು ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಜೊತೆ ಮೈತ್ರಿ ಮಾಡಿಕೊಂಡಿದ್ದ ಪವನ್ ಅವರ ಜೆಎಸ್‌ಪಿ ಪಕ್ಷವು 175 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆದ್ದಿತ್ತು. ಪಕ್ಷದ ನಾಯಕರಾದ ಪವನ್ ಕಲ್ಯಾಣ್ ಸ್ಪರ್ಧಿಸಿದ್ದ ಎರಡೂ ಸ್ಥಾನಗಳಲ್ಲಿ ಸೋತಿದ್ದರು.
ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಆಡಳಿತವನ್ನು ಕೊನೆಗೊಳಿಸಲು ಪ್ರಮುಖ ಪಕ್ಷಗಳೊಂದಿಗೆ ಜೆಎಸ್‌ಪಿ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಹಲವು ರಾಜಕೀಯ ಪಕ್ಷಗಳು ಮೈತ್ರಿಯೊಂದಿಗೆ ಪ್ರಬಲವಾಗಿ ಹೊರಹೊಮ್ಮಿವೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಆಡಳಿತ ವಿರೋಧಿ ಮತಗಳು ವಿಭಜನೆಯಾಗುವುದನ್ನು ತಡೆಯಲು ಜೆಎಸ್‌ಪಿ ಪ್ರಮುಖ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.