ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸಿನಿಮಾ ಅಂದ ಮೇಲೆ ನಿರೀಕ್ಷೆ ಹೆಚ್ಚೇ ಅಲ್ವಾ?. 'ಪಠಾಣ್' ಬಾಲಿವುಡ್ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಅದರಲ್ಲೂ ನಾಲ್ಕು ವರ್ಷಗಳ ಬ್ರೇಕ್ ನಂತರ ಮರಳುತ್ತಿರುವ ಶಾರುಖ್ ಅವರ ನಟನೆ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಅದರಂತೆ ಇಂದು ಬಹುನಿರೀಕ್ಷಿತ ಪಠಾನ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ. ಆ್ಯಕ್ಷನ್ ಚಿತ್ರಗಳನ್ನು ಮಾಡಿದ್ದರೂ ಕೂಡ ಶಾರುಖ್ ಖಾನ್ ರೊಮ್ಯಾಂಟಿಕ್ ಹೀರೋ ಅಂತಾನೆ ಫೇಮಸ್. ಆದರೆ ಪಠಾಣ್ ಚಿತ್ರದಲ್ಲಿ ನಿಮಗೆ ಭರಪೂರ ಆ್ಯಕ್ಷನ್ ಸೀನ್ಗಳು ಸಿಗಲಿದೆ ಅನ್ನೋ ಸುಳಿವನ್ನು ಟ್ರೈಲರ್ ನೀಡಿದೆ.
ಪಠಾಣ್ ಟ್ರೈಲರ್: ನಟ ಜಾನ್ ಅಬ್ರಾಹಂ ನೆಗೆಟಿವ್ ರೋಲ್ನಲ್ಲಿ ನಟಿಸಿದ್ದಾರೆ. ಉಗ್ರ ಸಂಘಟನೆ ನಡೆಸುವ ಅವರು ಕಾಂಟ್ರ್ಯಾಕ್ಟ್ ತೆಗೆದುಕೊಂಡು ದೇಶಗಳ ಮೇಲೆ ದಾಳಿ ಮಾಡುತ್ತಿರುತ್ತಾರೆ. ಈ ಸಂಘಟನೆ ಭಾರತವನ್ನು ಟಾರ್ಗೆಟ್ ಮಾಡುತ್ತದೆ. ಈ ದಾಳಿಯನ್ನು ತಪ್ಪಿಸಲು ಶಾರುಖ್ ಹೋರಾಡುತ್ತಾರೆ. ಇದಕ್ಕೆ ದೀಪಿಕಾ ಪಡುಕೋಣೆ ಸಾಥ್ ನೀಡುತ್ತಾರೆ. ಇದು ಚಿತ್ರ ಕಥೆ. ಟ್ರೈಲರ್ನಲ್ಲಿ ಸಾಕಷ್ಟು ಆ್ಯಕ್ಷನ್ ಸೀನ್ಗಳಿವೆ. ಶಾರುಖ್ ಹಾಗೂ ಜಾನ್ ಅಬ್ರಾಹಂ ಮುಖಾಮುಖಿಯಾಗಿ ಭರ್ಜರಿ ಫೈಟ್ ಮಾಡಿದ್ದಾರೆ. ವಾರ್ ಅಂತಹ ಆ್ಯಕ್ಷನ್ ಸಿನಿಮಾಗೆ ಹೆಸರುವಾಸಿಯಾಗಿರುವ ಸಿದ್ದಾರ್ಥ್ ಆನಂದ್ ಪಠಾಣ್ ಚಿತ್ರದಲ್ಲಿಯೂ ಭರಪೂರ ಆ್ಯಕ್ಷನ್ ಸೀನ್ಗಳನ್ನಿಟ್ಟಿದ್ದಾರೆ.
ಮೂರು ಭಾಷೆಗಳಲ್ಲಿ ಪಠಾಣ್: ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜನವರಿ 25ರಂದು ಬಿಡುಗಡೆ ಆಗಲಿದೆ. ಬಿಡುಗಡೆಗೆ ಮುಂಚಿತವಾಗಿ ಇಂದು ಚಿತ್ರ ತಯಾರಕರು ಎಲ್ಲ ಮೂರು ಭಾಷೆಗಳಲ್ಲಿ ಟ್ರೈಲರ್ ಅನ್ನು ಅನಾವರಣಗೊಳಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಪಠಾಣ್‌ನ ತಮಿಳು ಮತ್ತು ತೆಲುಗು ಭಾಷೆಯ ಟ್ರೇಲರ್‌ಗಳನ್ನು ಬಿಡುಗಡೆ ಮಾಡಲು ದಕ್ಷಿಣ ಚಿತ್ರರಂಗದ ಇಬ್ಬರು ಸೂಪರ್‌ಸ್ಟಾರ್‌ಗಳಾದ ದಳಪತಿ ವಿಜಯ್ ಮತ್ತು ರಾಮ್ ಚರಣ್ ಅವರನ್ನು ಆಹ್ವಾನಿಸಿತ್ತು.
ಸೌತ್ ಸೂಪರ್ಸ್ಟಾರ್ಸ್ ರಿಯಾಕ್ಷನ್: ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 4.1 ಮಿಲಿಯನ್ ಫಾಲೋವರ್ಸ್ ಹೊಂದಿರುವ ದಳಪತಿ ವಿಜಯ್ ಪಠಾಣ್ ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ. ಎಸ್‌ಆರ್‌ಕೆ ಮತ್ತು ಪಠಾಣ್ ತಂಡಕ್ಕೆ ಚಿತ್ರಕ್ಕಾಗಿ ಶುಭ ಹಾರೈಸಿದ್ದಾರೆ. ಪಠಾಣ್‌ಗೆ ತಂಡಕ್ಕೆ ಮತ್ತು ಶಾರುಖ್ ಅವರಿಗೆ ಶುಭವಾಗಲಿ ಎಂದು ವಿಜಯ್ ಟ್ವೀಟ್ ಮಾಡಿದ್ದಾರೆ.