ಮುಂಬೈ/ಕೋಲ್ಕತಾ: ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯ ಮೊದಲ ದಿನವೇ ವಿಶ್ವಾದ್ಯಂತ 106 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಯಶ್‌ರಾಜ್ ಫಿಲ್ಮ್ಸ್ ಬಹಿರಂಗಪಡಿಸಿದೆ. ಇಂದು ಮೂರನೇ ದಿನದ ಪ್ರದರ್ಶನ ನಡೆಯುತ್ತಿದ್ದು, ಕಳೆದ ಎರಡು ದಿನಗಳಲ್ಲಿ ಜಗತ್ತಿನಾದ್ಯಂತ 235 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಸಿನಿಮಾ ವ್ಯವಹಾರ ವಿಶ್ಲೇಷಕ ರಮೇಶ್ ಬಾಲ ಮಾಹಿತಿ ಹಂಚಿಕೊಂಡಿದ್ದಾರೆ.
ಯಶ್‌ರಾಜ್ ಫಿಲ್ಮ್ಸ್ ಮಾಹಿತಿ:ಹಿಂದಿ ಚಿತ್ರರಂಗದಲ್ಲಿ ಇದೊಂದು ದಾಖಲೆಯಾಗಿದೆ. ಸಿನಿಮಾ ತೆರೆಕಂಡ ಮೊದಲ ದಿನ ವಿಶ್ವಾದ್ಯಂತ 106 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಭಾರತದಲ್ಲಿ 69 ಕೋಟಿ ರೂ., ವಿದೇಶದಲ್ಲಿ 37 ಕೋಟಿ ರೂ., ಬಾಚಿಕೊಂಡಿದೆ.
ತರಣ್ ಆದರ್ಶ್ ಮಾಹಿತಿ: ಸಾಕಷ್ಟು ಬಹಿಷ್ಕಾರದ ಟ್ರೋಲ್‌ಗಳನ್ನು ಎದುರಿಸಿದ ಚಿತ್ರವೊಂದು ಮೊದಲ ದಿನ ಈ ಮಟ್ಟಿಗೆ ಕಲೆಕ್ಷನ್ ಮಾಡಿದ್ದಕ್ಕೆ ಚಿತ್ರ ಪಂಡಿತರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಎರಡನೇ ದಿನದ ಕಲೆಕ್ಷನ್ ಕೂಡಾ ಕಡಿಮೆಯಿಲ್ಲ. ಮೂಲಗಳಿಂದ ದೊರೆತ ಮಾಹಿತಿಯಂತೆ, 70 ಕೋಟಿ ರೂಪಾಯಿಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಎಎನ್‌ಐ ಜೊತೆ ಮಾತನಾಡಿರುವ ಸಿನಿಮಾ ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್, ಚಿತ್ರ ಬಿಡುಗಡೆಯಾದ ಮೊದಲ ದಿನ 57 ಕೋಟಿ ರೂಪಾಯಿ ಗಳಿಸಿದೆ. 2 ನೇ ದಿನದ ಅಂತಿಮ ಕಲೆಕ್ಷನ್‌ಗಳು ಇನ್ನೂ ಬರಬೇಕಿದೆ, ಆದರೆ ಅಂದಾಜಿನ ಪ್ರಕಾರ ಚಿತ್ರವು 70 ಕೋಟಿ ಗಳಿಸಲಿದೆ, ಇದು ಐತಿಹಾಸಿಕ ಸಂಗ್ರಹ ಆಗಲಿದೆ. ಯಾವುದೇ ಹಿಂದಿ ಚಿತ್ರವು ಕೇವಲ ಒಂದೇ ದಿನದಲ್ಲಿ 70 ಕೋಟಿ ರೂಪಾಯಿ ಗಳಿಸಿಲ್ಲ ಎಂದು ತಿಳಿಸಿದ್ದಾರೆ.
ರಮೇಶ್ ಬಾಲ ಮಾಹಿತಿ: ಮತ್ತೋರ್ವ ಸಿನಿಮಾ ವ್ಯವಹಾರ ವಿಶ್ಲೇಷಕ ರಮೇಶ್ ಬಾಲ ಪ್ರಕಾರ, ಕಳೆದ ಎರಡು ದಿನಗಳಲ್ಲಿ ಒಟ್ಟು 235 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಯಶಸ್ಸು ಕಂಡಿದೆ ಪಠಾಣ್ ಸಿನಿಮಾ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಸಿನಿಮಾ ಜನವರಿ 25 ರಂದು ಬಿಡುಗಡೆಯಾಗಿತ್ತು. ಶಾರುಖ್ ಜೊತೆಗೆ, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರ ಅಭಿನಯ ಮತ್ತು ದೃಶ್ಯಗಳು ವಿಶೇಷವಾಗಿ ಪ್ರೇಕ್ಷಕರಿಗೆ ಮನರಂಜನೆ ಒದಗಿಸಿದೆ. ನಾಯಕಿಯ ದಿರಿಸಿನ ಬಣ್ಣ ಹಾಗೂ ಹಾಡಿನ ಕೆಲವು ದೃಶ್ಯಗಳನ್ನು ಟೀಕಿಸಿದ್ದ ಕೆಲವರು ಚಿತ್ರ ಬಹಿಷ್ಕರಿಸುವಂತೆ ಆಗ್ರಹಿಸಿದ್ದರು. ಇಂತಹ ಟೀಕೆಗಳನ್ನು ಎದುರಿಸುತ್ತಿದ್ದರೂ ಮುಂಗಡ ಬುಕ್ಕಿಂಗ್ನಲ್ಲಿ ಚಿತ್ರ ಹಿಂದೆ ಬೀಳಲಿಲ್ಲ. 2018ರಲ್ಲಿ ತೆರೆಕಂಡ 'ಜೀರೋ' ಚಿತ್ರದ ನಂತರ ಶಾರುಖ್ ಸುಮಾರು ನಾಲ್ಕು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು.
ಕುಸಿದು ಬಿದ್ದ ಸಿನಿಮಾ ಹಾಲ್ ಸೀಲಿಂಗ್:ಪಶ್ಚಿಮ ಬಂಗಾಳದ ಕಂಡಿಯಲ್ಲಿ ಗುರುವಾರ ಪಠಾಣ್ ಸಿನಿಮಾ ವೀಕ್ಷಿಸುತ್ತಿದ್ದಾಗ ಸಿನಿಮಾ ಹಾಲ್‌ನ ಸೀಲಿಂಗ್ ಕುಸಿದು ಐವರು ಗಾಯಗೊಂಡರು. ಸ್ಥಳೀಯ ಮಾಧ್ಯಮ ವರದಿಗಳಂತೆ, ಘಟನೆಯು ಮಧ್ಯಾಹ್ನ 1:30 ರ ಸುಮಾರಿಗೆ ನಡೆದಿದೆ. ಛಾಯಾಪಥ ಸಿನಿಮಾ ಹಾಲ್ ಹೌಸ್ ಫುಲ್ ಆಗಿತ್ತು. ಜನರು ಸಿನಿಮಾ ನೋಡುತ್ತಿದ್ದಾಗ ದಿಢೀರ್ ಛಾವಣಿಯ ಒಂದು ಭಾಗ ವೀಕ್ಷಕರ ಮೇಲೆಯೇ ಬಿದ್ದಿದೆ. ಗಾಯಾಳುಗಳನ್ನು ಕಂದಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಮೇಲ್ಛಾವಣಿ ಕುಸಿತಕ್ಕೆ ನಿಖರ ಕಾರಣ ತಿಳಿಯಲು ಕಂದಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಳೆ ಕಟ್ಟಡವಾಗಿದ್ದು ಘಟನೆ ನಡೆದಿದೆ ಎಂದು ಕಂದಿ ಶಾಸಕ ಅಪೂರಬಾ ಸರ್ಕಾರ್ ಹೇಳಿದರು. ಚಿತ್ರಮಂದಿರವನ್ನು ನಗರಸಭೆ ವಶಕ್ಕೆ ಪಡೆದಿದ್ದು, ಮುಂದೆ ಇಂತಹ ಘಟನೆಗಳು ನಡೆಯದಂತೆ ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.
ಕೆಜಿಎಫ್-2 ದಾಖಲೆ ಮುರಿದ ಪಠಾಣ್: 14 ಏಪ್ರಿಲ್ 2022 ರಂದು ಬಿಡುಗಡೆ ಕಂಡ ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಚಿತ್ರದ ಹಿಂದಿ ಅವತರಣಿಕೆ ಮೊದಲ ದಿನವೇ 53.95 ಕೋಟಿ ರೂ ಗಳಿಸಿತ್ತು. ಕೆಜಿಎಫ್ ಚಾಪ್ಟರ್ 2 ನಂತರ ಸಿದ್ಧಾರ್ಥ್ ಆನಂದ್ ಅಭಿನಯದ ವಾರ್ ಚಿತ್ರವು ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಆರಂಭಿಕ ಕಲೆಕ್ಷನ್ ಮಾಡಿತ್ತು. 2 ಅಕ್ಟೋಬರ್ 2019 ರಂದು ಬಿಡುಗಡೆ ಕಂಡ ವಾರ್ ಚಿತ್ರ ಮೊದಲ ದಿನ 53.35 ಕೋಟಿ ರೂಪಾಯಿ ವ್ಯವಹಾರ ಮಾಡಿತ್ತು. ಆದರೆ, ಈಗ ಪಠಾಣ್ ದೊಡ್ಡ ಚಿತ್ರಗಳ ದಾಖಲೆಗಳನ್ನು ಪುಡಿಗಟ್ಟಿದೆ. ಒಂದೇ ದಿನದಲ್ಲಿ 106 ಕೋಟಿ ರೂ., ಎರಡು ದಿನಗಳಲ್ಲಿ 235 ಕೋಟಿ ರೂಪಾಯಿ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ಇದನ್ನೂ ಓದಿ:ಆಗಸ್ಟ್ ತಿಂಗಳಲ್ಲಿ ತೆರೆಕಾಣಲಿದೆ 22 ವರ್ಷಗಳ ಹಿಂದಿನ 'ಗದರ್' ಸೀಕ್ವೆಲ್