ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟನೆಯ ಪಠಾಣ್ ಸಿನಿಮಾ ಸುಮಾರು 100 ದೇಶಗಳಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಆ್ಯಕ್ಷನ್ ಅವತಾರದಲ್ಲಿ ರೊಮ್ಯಾನ್ಸ್ ಕಿಂಗ್ ಅಬ್ಬರಿಸಿದ್ದು, ಶಾರುಖ್ ಅಭಿನಯ ಮೈನವಿರೇಳಿಸುವಂತಿದೆ. ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟನೆ ಕೂಡ ಅತ್ಯುತ್ತಮವಾಗಿ ಮೂಡಿ ಬಂದಿದೆ. ಈ ಸಿನಿಮಾ ಭಾರಿ ಮೆಚ್ಚುಗೆ ಜೊತೆಗೆ ವಿರೋಧವನ್ನೂ ಎದುರಿಸುತ್ತಿದೆ. ದೇಶದ ಹಲವೆಡೆ ಪ್ರತಿಭಟನೆ ಭುಗಿಲೆದ್ದಿದ್ದು ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಮತ್ತೊಂದೆಡೆ ಸಿನಿಮಾ ಕೆಲ ವೆಬ್ಸೈಟ್ನಲ್ಲಿ ಲೀಕ್ ಆಗಿದೆ ಎಂದು ಊಹಿಸಿ ಸೋಷಿಯಲ್ ಮಿಡಿಯಾದಲ್ಲಿ ವದಂತಿ ವೈರಲ್ ಆಗುತ್ತಿದೆ. ಆದರೆ ಕೆಲ ಮೂಲಗಳನ್ನು ನಂಬುವುದಾದರೆ ಪಠಾಣ್ ಚಿತ್ರ ಲೀಕ್ ಆಗಿಲ್ಲ.
ಪಠಾಣ್‌ಗೆ 12A ಸೆನ್ಸಾರ್ ರೇಟಿಂಗ್: ಬ್ರಿಟೀಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಶನ್‌ನ ಸ್ಪಷ್ಟೀಕರಣದ ಪ್ರಕಾರ, ಪಠಾಣ್‌ಗೆ 12A ಸೆನ್ಸಾರ್ ರೇಟಿಂಗ್ ಅನ್ನು ನೀಡಿವೆ. 12A ರೇಟಿಂಗ್ ವ್ಯವಸ್ಥೆಯ ಪ್ರಕಾರ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರೊಬ್ಬರೂ ಕೂಡ ಆ ಚಲನಚಿತ್ರವನ್ನು ದೊಡ್ಡವರು ಜೊತೆಯಿಲ್ಲದಿದ್ದರೆ ಚಿತ್ರಮಂದಿರದಲ್ಲಿ ನೋಡುವಂತಿಲ್ಲ. 12 ವರ್ಷದೊಳಗಿನ ಮಗುವನ್ನು ಥಿಯೇಟರ್ಗೆ ಕರೆದೊಯ್ಯಲು ಯೋಜಿಸುವ ವಯಸ್ಕರು ಆ ಮಗುವಿಗೆ ಚಲನಚಿತ್ರವು ಸೂಕ್ತವಾಗಿದೆಯೇ ಎಂಬುದನ್ನು ಪರಿಗಣಿಸಬೇಕು. ವರದಿಗಳ ಪ್ರಕಾರ, ರಕ್ತಸಿಕ್ತ ಗಾಯಗಳು, ಲೈಂಗಿಕ ದೃಶ್ಯಗಳ ಹಿನ್ನೆಲೆ ಮಂಡಳಿಯು ಪಠಾನ್‌ಗೆ 12A ರೇಟಿಂಗ್ ನೀಡಿತು. ಗುಂಡಿನ ದಾಳಿಗಳು, ಇರಿತಗಳು, ಕತ್ತು ಹಿಸುಕುವುದು, ಸ್ಫೋಟಗಳು, ಜೊತೆಗೆ ಹೊಡೆದಾಟಗಳನ್ನು ಚಿತ್ರ ಒಳಗೊಂಡಿದೆ.
ಪಠಾಣ್ ಸಿನಿಮಾಗೆ ತೀವ್ರ ವಿರೋಧ:ಪಠಾಣ್ ಸಿನಿಮಾ ಭಾರತ ಸೇರಿದಂತೆ ವಿಶ್ವದ 100 ದೇಶಗಳಲ್ಲಿ ಬಿಡುಗಡೆಯಾಗಿದೆ. ವಿವಾದಗಳಿಂದಲೇ ಸದ್ದು ಮಾಡಿರುವ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಬಹುತೇಕ ಥಿಯೇಟರ್ ಮುಂಭಾಗ ಪ್ರತಿಭಟನೆ ಕೂಡ ನಡೆದಿದೆ. ಡಿಸೆಂಬರ್ 2ನೇ ವಾರದಲ್ಲಿ ಭುಗಿಲೆದ್ದಿರುವ ಬೇಶರಂ ರಂಗ್ ವಿವಾದದ ಕಿಡಿ ಇಂದು ಸ್ಪೋಟಗೊಂಡಿದೆ.